ಮಲ್ಲಪ್ಪ. ಸಿ. ಖೊದ್ನಾಪೂರ| ತಿಕೋಟಾ
ಧ್ಯಾನ್ ಚಂದ್‌ರವರ ಹಾಕಿ ಆಟಕ್ಕೆ ಮನಸೋಲದವರೇ ಇಲ್ಲ. ತಮ್ಮ ಅದ್ಭುತ ಕ್ರೀಡಾ ಪ್ರತಿಭೆಯಿಂದ ಇಡೀ ಎದುರಾಳಿ ತಂಡದವರನ್ನು ಹಾಗೂ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದರು. ತಮ್ಮ ಶ್ರೇಷ್ಠ ಕ್ರೀಡಾ ಸಾಧನೆಯೊಂದಿಗೆ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಲು ಶ್ರಮಿಸಿದ ಹಾಕಿ ಮಾಂತ್ರಿಕನೆಂದೇ ಪ್ರಸಿದ್ಧಿ ಪಡೆದ ಧ್ಯಾನ್ ಚಂದ್‌ರವರ ಕ್ರೀಡಾ ಸಾಧನೆಯನ್ನು ಗುರುತಿಸಿದ ಭಾರತ ಸರ್ಕಾರ 1956ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಮಕ್ಕಳ ತಜ್ಞರ ಪ್ರಕಾರ, ಮಗುವಿನ ವ್ಯಕ್ತಿತ್ವ ವಿಕಸನ ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಆಗದು. ಆಟವೆಂದರೆ ಅದೊಂದು ದೈಹಿಕ ಮತ್ತು ಬೌದ್ಧಿಕ ವಿಕಾಸದ ಭಾಗ. ಆದ್ದರಿಂದ ಮಕ್ಕಳನ್ನು ಮುಕ್ತವಾದ ಪರಿಸರದಲ್ಲಿ ಇತರರೊಂದಿಗೆ ಸ್ವಚ್ಛಂದವಾಗಿ ಆಟವಾಡಲು, ನಲಿದು-ಕುಣಿದು, ಬೆರೆಯಲು ಬಿಡಬೇಕು. ಅಂದಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯವೆಂದು ಹೇಳಿದ್ದಾರೆ.
ವಿಶ್ವವಿಖ್ಯಾತ್ ಹಾಕಿ ಕ್ರೀಡಾಪಟು ಧ್ಯಾನ್ ಚಂದ್ ಅವರ ಪ್ರಕಾರ “To demand more of yourself than you do of others. Is the first step of any leader of success” ಎನ್ನುವಂತೆ `ಆಟ ಯಾವುದೇ ಆಗಿರಲಿ, ಅದರಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿ ಮತ್ತು ಮನೋಭಾವನೆಯಿಂದ ಆಟವನ್ನು ಆಡಬೇಕು’ ಎಂದು ಹೇಳಿದ್ದಾರೆ. ಹೀಗೆ ಕ್ರೀಡೆ, ಕ್ರೀಡಾ ಕೌಶಲ್ಯ ಮತ್ತು ತಮ್ಮ ಸಾಧನೆಯಿಂದಲೇ ಇಡೀ ಜಗತ್ತಿನಲ್ಲಿಯೇ ಭಾರತ ದೇಶಕ್ಕೆ ಕೀರ್ತಿ ಹೆಚ್ಚಿಸಿದ ಮೇರು ವ್ಯಕ್ತಿತ್ವವೆಂದರೆ ಹಾಕಿ ಮಾಂತ್ರಿಕ ಧ್ಯಾನ್ ಚಂದ್‌ರವರು.
ತಮ್ಮದೇ ಕ್ರೀಡಾ ಕೌಶಲ್ಯ, ಪ್ರತಿಭೆ ಮತ್ತು ಅಮೋಘ ಸಾಧನೆಯ ಮೂಲಕವೇ ಭಾರತೀಯ ಹಾಕಿ ಕ್ರೀಡಾ ಲೋಕಕ್ಕೆ ಶ್ರೇಷ್ಠ ಗೌರವ ತಂದು ಕೊಟ್ಟ ಅನುಕರಣೀಯ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್. ಹೀಗೆ ಭಾರತದ ರಾಷ್ಟ್ರೀಯ ಕ್ರೀಡೆಗೆ ಹೊಸ ಭಾಷ್ಯ ಬರೆದ ಧ್ಯಾನ್ ಚಂದ್‌ರವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ.
ಕೇವಲ ಜ್ಞಾನ, ಅಂಕ, ಪದವಿ ಪಡೆಯಬೇಕೆಂಬ ಹಾಗೂ ಜೀವನೋಪಾಯಕ್ಕೊಂದು ಸಾಧನವಾಗುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಸಾಧನೆ ತೋರಿ ಉತ್ತಮ ಕರಿಯರ್ (ಭವಿಷ್ಯ) ರೂಪಿಸಿಕೊಳ್ಳಬಹುದೆಂಬುದಕ್ಕೆ ಒಳ್ಳೆಯ ನಿದರ್ಶನವೇ ಧ್ಯಾನ್ ಚಂದ್‌ರವರು. ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆಗೈದ ಧ್ಯಾನ್ ಚಂದ್ ಅವರ ಹುಟ್ಟುಹಬ್ಬವನ್ನು ಭಾರತದಲ್ಲಿ ಪ್ರತಿವರ್ಷ ರಾಷ್ಟ್ತೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಕ್ರೀಡಾ ಧ್ರುವತಾರೆ ಎಂದೇ ಹೆಸರುವಾಸಿಯಾಗಿದ್ದ ಧ್ಯಾನ್ ಚಂದ್ ಅವರು ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಸಮೇಶ್ವರ ಸಿಂಗ್ ಮತ್ತು ಶಾರದಾ ಸಿಂಗ್ ದಂಪತಿಗಳ ಸುಪುತ್ರನಾಗಿ ಜನಿಸಿದರು. ಅವರು ತಮ್ಮ ಬಾಲ್ಯ ಜೀವನದಲ್ಲಿಯೇ ಕ್ರೀಡೆಯಲ್ಲಿ ಬಹಳ ಉತ್ಸುಕರಾಗಿದ್ದು, 16ನೆಯ ವಯಸ್ಸಿನಲ್ಲಿ ಸೈನ್ಯವನ್ನು ಸೇರಿದರು. ಸೇನಾಪಡೆಯಲ್ಲಿ ಹಮ್ಮಿಕೊಂಡದ್ದ ಕ್ರೀಡೆಗಳಲ್ಲಿ ಅವರು ತೋರಿದ ಸಾಧನೆಯನ್ನು ಗಮನಿಸಿದ ಮೇಜರ್ ಬೋಲೆ ತಿವಾರಿ ಎಂಬುವವರಿಂದ ಹಾಕಿ ಆಟದ ವಿಶೇಷತೆಗಳ ಬಗ್ಗೆ ತರಬೇತಿ ಪಡೆದು ಮುಂದೆ ಕ್ರೀಡೆಯಲ್ಲಿ ಉತ್ತುಂಗ ಮಟ್ಟದ ಸಾಧನೆಗೈದರು.
ಭಾರತದ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ಆಟದಲ್ಲಿ ತಮ್ಮದೇ ಛಾಪು ಮೂಡಿಸಿ, ಗೋಲು ಗಳಿಸುವ ಚಾಕಚಕ್ಯತೆಯಿಂದ ವಿಶ್ವದಲ್ಲೇ ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1926ರಲ್ಲಿ ಅಂತಾರಾಷ್ಟ್ರೀಯ ಹಾಕಿ ಕ್ರೀಡೆಯ ವೃತ್ತಿಯನ್ನು ಆರಂಭಿಸಿದ ಧ್ಯಾನ್ ಚಂದ್ ಅವರು 1928 ರಿಂದ 1936 ರವರೆಗಿನ ಅವಧಿಯಲ್ಲಿ ತಮ್ಮ ನಾಯಕತ್ವದಲ್ಲಿ ಭಾರತವು ಗೆದ್ದು ಮೂರು ಒಲಿಂಪಿಕ್ ಪಂದ್ಯಗಳಲ್ಲಿ ಸತತ ಮೂರು ಚಿನ್ನದ ಪದಕ ತಂದು ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗೆ ವಿಶ್ವ ಕ್ರೀಡಾಲೋಕದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದರು ಮತ್ತು ಒಂದು ದಂತಕತೆಯಾದವರು ಧ್ಯಾನ್ ಚಂದ್‌ರವರು.
ಆದ್ದರಿಂದ ಕೇವಲ ಮೊಬೈಲ್, ಫೇಸ್‌ಬುಕ್, ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಅಮೂಲ್ಯವಾದ ಸಮಯವನ್ನು ಕಾಲಹರಣ ಮಾಡುತ್ತಿರುವ ಹಾಗೂ ಆಧುನಿಕತೆಗೆ ಮಾರು ಹೋಗುತ್ತಿರುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಮಕ್ಕಳು-ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಮತ್ತು ಕ್ರೀಡಾ ಮನೋಭಾವನೆಯನ್ನು ಮೂಡಿಸಿ ಮಕ್ಕಳಲ್ಲಿ ಕ್ರೀಡಾ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ.
ಇಂದಿನ ಯುವ ಪೀಳಿಗೆಗೆ ಕ್ರೀಡಾ ಸಾಧನೆಯಿಂದ ಜಗತ್ತಿನಲ್ಲಿಯೇ ಭಾರತದ ಕೀರ್ತಿ ಪತಾಕೆಯನ್ನು ಜಗದಗಲ ಪಸರಿಸಿದ ಧ್ಯಾನ್ ಚಂದ್ ಅವರ ಜೀವನ, ಆದರ್ಶ, ತತ್ವಗಳನ್ನು ಮತ್ತು ಅವರು ತೋರಿದ ಕ್ರೀಡಾಸಕ್ತಿ ಮತ್ತು ಸಾಧನೆಯನ್ನು ತಿಳಿಸಿಕೊಡುವ ಕಾರ್ಯ ನಡೆಯಬೇಕಾಗಿದೆ.
ಆದ್ದರಿಂದ ಇಂದಿನ ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾದ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅರಳಲು ದೊರೆಯುವ ಎಲ್ಲ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಜೊತೆಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಸನಗೊಳ್ಳಲು ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ.
ದೇಶದ ಹೆಮ್ಮೆಯ ಕ್ರೀಡಾಪಟುವಾಗಿದ್ದ ಹಾಕಿ ಮಾಂತ್ರಿಕ ಧ್ಯಾನಚಂದ್‌ರವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರೀಡಾಸಕ್ತಿ, ಅಭಿರುಚಿ ಮತ್ತು ಪ್ರತಿಭೆಯು ಅನಾವರಣಗೊಳ್ಳಲು ಹಾಗೂ ದೇಶದ ಭಾವೀ ಕ್ರೀಡಾಪಟುಗಳಾಗಿ ಹೊರಹೊಮ್ಮಲು ರಾಷ್ಟ್ರದ ಹಿರಿಮೆ-ಗರಿಮೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಬೇಕು. ಅಂದಾಗ ಮಾತ್ರ ಧ್ಯಾನ್ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುವುದು ನಿಜಕ್ಕೂ ಅರ್ಥಪೂರ್ಣ ಹಾಗೂ ಸಾರ್ಥಕವಾಗುತ್ತದೆ.