ಧಾರವಾಡದಲ್ಲಿ ₹50 ಕೋಟಿ ವೆಚ್ಚದ ಆಧುನಿಕ ಕ್ರೀಡಾ ಸಂಕೀರ್ಣ ಇಂದು ಉದ್ಘಾಟನೆ
ಧಾರವಾಡ: ಉತ್ತರ ಕರ್ನಾಟಕದ ಕ್ರೀಡಾಪಟುಗಳ ಬಹುಕಾಲದ ಕನಸು ಇದೀಗ ನನಸಾಗುತ್ತಿದೆ. ಧಾರವಾಡದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವನ್ನು ಇಂದು (14-03 ಶನಿವಾರ) ಉದ್ಘಾಟಿಸಲಾಗುತ್ತಿದೆ.
ಮಧ್ಯಾಹ್ನ 3.30ಕ್ಕೆ ಕೇಂದ್ರ ಸಚಿವರಾದ ಮನ್ಸುಖ ಮಾಂಡವೀಯಾ ಮತ್ತು ಪ್ರಹ್ಲಾದ ಜೋಶಿ ಅವರು ಈ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ಈ ಸಂಕೀರ್ಣ ನಿರ್ಮಾಣದಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಸೌಲಭ್ಯಗಳು ದೊರೆಯಲಿದ್ದು, ಕ್ರೀಡಾ ಚಟುವಟಿಕೆಗಳಿಗೆ ಹೊಸ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕ್ರೀಡಾಪಟುಗಳ ಬಹುಕಾಲದ ಬೇಡಿಕೆ ಈಡೇರಿಕೆ : ಧಾರವಾಡ ಜಿಲ್ಲೆಯಲ್ಲಿ ಪ್ರತ್ಯೇಕ ಕ್ರೀಡಾ ಸಂಕೀರ್ಣದ ಕೊರತೆಯಿಂದ ಕ್ರೀಡಾಪಟುಗಳು ಹಲವು ವರ್ಷಗಳಿಂದ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಹಾಗೂ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಶಾಸಕ ಅರವಿಂದ ಬೆಲ್ಲದ್ ಅವರು ನಿರಂತರವಾಗಿ ಪರಿಶ್ರಮ ಪಟ್ಟಿದ್ದಾರೆ.
₹50 ಕೋಟಿ ವೆಚ್ಚದಲ್ಲಿ ನಿರ್ಮಾಣ : ಸುಮಾರು ₹50 ಕೋಟಿ ವೆಚ್ಚದಲ್ಲಿ 1.6 ಎಕರೆ ಪ್ರದೇಶದಲ್ಲಿ ಈ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಯೋಜನೆಗೆ NMDC Limited ಮತ್ತು ಒಎನ್‌ಜಿಸಿ ಕಂಪನಿಗಳ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಂಪನಿಗಳ CSR ಅನುದಾನ ಬಳಸಲಾಗಿದೆ.
ಆಧುನಿಕ ಸೌಲಭ್ಯಗಳೊಂದಿಗೆ ಸಂಕೀರ್ಣ : ಜಿ+3 ಮಹಡಿಗಳ ಈ ಸಂಕೀರ್ಣದಲ್ಲಿ ಕ್ರೀಡಾಪಟುಗಳಿಗೆ ಹಾಗೂ ವೀಕ್ಷಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಒಳಾಂಗಣ ಕ್ರೀಡೆಗಳಿಗೆ ವಿಶಾಲ ಮೈದಾನ, ಬ್ಯಾಡ್ಮಿಂಟನ್ ಕೋರ್ಟ್, ಕಬಡ್ಡಿ ಅಂಕಣ, ಜುಡೋ ತರಬೇತಿ ಕೇಂದ್ರ, ಜಿಮ್ ಮತ್ತು ತರಬೇತುದಾರರ ಕೊಠಡಿ, ವೈದ್ಯಕೀಯ ಕೊಠಡಿ, ವೀಕ್ಷಕರ ಗ್ಯಾಲರಿ, ಕ್ಯಾಂಟಿನ್ ಹಾಗೂ ಕ್ರೀಡಾ ಸಾಮಗ್ರಿಗಳ ಮಳಿಗೆ, ಕಾರು ಮತ್ತು ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಬಹುತೇಕ ಕಟ್ಟಡವನ್ನು ಸ್ಟೀಲ್ ರಚನೆಯೊಂದಿಗೆ ಹೊಸ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ವಿಶೇಷತೆ : ಈ ಕ್ರೀಡಾ ಸಂಕೀರ್ಣದ ಪ್ರಮುಖ ಆಕರ್ಷಣೆ ಅಂತಾರಾಷ್ಟ್ರೀಯ ಮಾನದಂಡದ ಈಜುಕೊಳವಾಗಿದೆ.
ಈಜುಕೊಳದ ವೈಶಿಷ್ಟ್ಯಗಳು: ಉದ್ದ: 51.5 ಮೀಟರ್, ಅಗಲ: 25 ಮೀಟರ್, ಒಟ್ಟು 10 ಲೇನ್‌ಗಳು. ಸ್ಪರ್ಧೆಗೆ ಮಧ್ಯದ 8 ಲೇನ್ ಬಳಕೆ. ಪ್ರತಿ ಲೇನ್ ಅಗಲ: 2.5 ಮೀಟರ್, ಆಳ: 2 ಮೀಟರ್, ನೀರಿನ ತಾಪಮಾನ: 25°–28°C, ಕನಿಷ್ಠ 1500 ಲಕ್ಸ್ ಬೆಳಕು ವ್ಯವಸ್ಥೆ ಸ್ಪರ್ಧೆ ಸಂದರ್ಭದಲ್ಲಿ ಅಲೆಗಳನ್ನು ತಡೆಯಲು ಬದಿಯ ಎರಡು ಲೇನ್‌ಗಳನ್ನು ಖಾಲಿ ಬಿಡುವ ವ್ಯವಸ್ಥೆಯೂ ಇದೆ.
RVNL ಮೂಲಕ ನಿರ್ಮಾಣ: ಈ ಕ್ರೀಡಾ ಸಂಕೀರ್ಣದ ನಿರ್ಮಾಣ ಕಾರ್ಯವನ್ನು Rail Vikas Nigam Limited ಮೂಲಕ ಜಾರಿಗೆ ತರಲಾಗಿದೆ. ಆರ್‌ವಿಎನ್‌ಎಲ್ ಸಂಸ್ಥೆ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಸಹಯೋಗದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿದೆ. ಈ ಸಂಕೀರ್ಣದಿಂದ ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಅವಕಾಶ ದೊರೆಯಲಿದೆ ಎಂದು ಕ್ರೀಡಾ ವಲಯದಲ್ಲಿ ಸಂತೋಷ ವ್ಯಕ್ತವಾಗಿದೆ.























