ಬೆಂಗಳೂರು: ಕೆಎಸ್‌ಸಿಎ ಕಾಲ್ತುಳಿತದ ದುರಂತ ನಡೆದ ಬಹುದಿನಗಳ ಬಳಿಕ ಆರ್‌ಸಿಬಿ ಸಾಮಾಜಿಕ ತಾಣದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಬೆನ್ನಲ್ಲೇ, ಈಗ ಆಟಗಾರ ವಿರಾಟ್ ಕೊಹ್ಲಿ ಕೂಡ ತನ್ನ ಸಂತಾಪ ಸೂಚಿಸಿದ್ದಾರೆ.
ಇದೇ ಮೊದಲ ಬಾರಿಗೆ ಬೆಂಗಳೂರಿನ ಕಾಲ್ತುಳಿತದ ಬಗ್ಗೆ ಮಾತನಾಡಿರುವ ಕೊಹ್ಲಿ, `ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾದ ಅವ್ಯವಸ್ಥೆಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದರು. ಐಪಿಎಲ್ ಟ್ರೋಫಿಯನ್ನು ಎತ್ತುವ 18 ವರ್ಷಗಳ ಕಾಯುವಿಕೆಗೆ ಅಂತ್ಯಗೊಳಿಸಿದರೂ, ತಂಡ ಹಾಗೂ ಅಭಿಮಾನಿಗಳಿಗೆ ಆಚರಿಸಲು ಕಷ್ಟಕರವಾಗಿದ್ದಲ್ಲದೇ, ದುರಂತದಲ್ಲಿ ಅಂತ್ಯಗೊಂಡಿದೆ.’ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ `ಎಕ್ಸ್’ನಲ್ಲಿ, ಆರ್‌ಸಿಬಿ ದುರಂತದ ಬಗ್ಗೆ ವಿರಾಟ್ ಅವರ ಆಲೋಚನೆಗಳನ್ನು ಹಂಚಿಕೊಂಡಿದ್ದು, ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡ ಅಭಿಮಾನಿಗಳಿಗೆ ಗೌರವ ಸೂಚಿಸಿದ್ದಾರೆ.
“ದುರಂತ ನಡೆಯಲಿದೆ ಎಂದು ಯಾರೂ ಊಹೆ ಮಾಡಿರುವುದಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾದದ್ದು, ಆದರೆ ದುರಂತವಾಗಿ ಮಾರ್ಪಟ್ಟಿತು. ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ನಾನು ಯೋಚಿಸುತ್ತಿದ್ದೇನೆ, ಅವರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಒಟ್ಟಾಗಿ, ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯುತ್ತೇವೆ” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಲಂಡನ್‌ನಲ್ಲೇ ಫಿಟ್ನೆಸ್ ಟೆಸ್ಟ್: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ಒಳಪಟ್ಟಿದ್ದಾರೆ. ಇದಕ್ಕಾಗಿ ಲಂಡನ್‌ನಲ್ಲೇ ಕೊಹ್ಲಿ ಯೋ ಯೋ ಟೆಸ್ಟ್ ಹಾಗೂ ಬ್ರೊನ್ಕೋ ಟೆಸ್ಟ್ ಒಳಗಾಗಿದ್ದು, ಪಾಸ್ಸಾಗಿದ್ದಾರೆ. ಉಳಿದ ಆಟಗಾರರಾದ ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಅವರಿಗೆ ಕೇವಲ ಯೋ ಯೋ ಟೆಸ್ಟ್ ಅಷ್ಟೇ ನಡೆಸಲಾಗಿದ್ದು, ಬ್ರೊನ್ಕೋ ಟೆಸ್ಟ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ವರದಿಗಳಾಗಿವೆ.