ಬೆಂಗಳೂರು: ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ “ಚೇನಂಡ ಹಾಕಿ ಪಂದ್ಯಾವಳಿ”ಯ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕೊಡವರು ಅಂದ್ರೆ ಹಾಕಿ, ಹಾಕಿ ಅಂದ್ರೆ ಕೊಡವರು!” ಎಂದು ಹೇಳುತ್ತಾ ಕೊಡಗಿನ ಹಾಕಿ ಪರಂಪರೆಯ ಗೌರವವನ್ನು ಸ್ಮರಿಸಿದರು. ಕೊಡಗು ಜಿಲ್ಲೆ ದೇಶಕ್ಕೆ ಅನೇಕ ಪ್ರತಿಭಾವಂತ ಹಾಕಿ ಆಟಗಾರರನ್ನು ನೀಡಿದ್ದು, ಅವರು ಏಷ್ಯನ್ ಗೇಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಪ್ರಶಂಸಿಸಿದರು.
“ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ನೀಡಲಾಗುವುದು. ಕೊಡವ ಸಂಸ್ಕೃತಿ ತನ್ನದೇ ಆದ ಭಿನ್ನತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡಿದೆ. ಇದು ನಮ್ಮ ರಾಜ್ಯದ ಹೆಮ್ಮೆಯ ಸಂಸ್ಕೃತಿ. 2026ರ ಮೇ ತಿಂಗಳಲ್ಲಿ ನಡೆಯುವ ಪಂದ್ಯಾವಳಿಗೆ ನಾನು ಸ್ವತಃ ಭಾಗವಹಿಸುತ್ತೇನೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರು ಎನ್.ಎಸ್. ಬೋಸರಾಜು, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಸೇರಿದಂತೆ ಕೊಡವ ಸಮುದಾಯದ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಈ ಲೋಗೋ ಬಿಡುಗಡೆ ಸಮಾರಂಭದಲ್ಲಿ ಕೊಡವ ಪರಂಪರೆಯ ಕ್ರೀಡೆಗೆ ಸರ್ಕಾರದ ಬೆಂಬಲ ಮತ್ತಷ್ಟು ಬಲಪಡೆದಂತಾಗಿದೆ.


























