ಯುಎಸ್ ಓಪನ್: ಅಲ್ಕರಾಜ್‌ಗೆ ಪಟ್ಟಾಭಿಷೇಕ, ಮರಳಿ ವಿಶ್ವ ನಂ.1

0
36

ನ್ಯೂಯಾರ್ಕ್: ವಿಶ್ವದ ನಂಬರ್ 1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್ ಅವರಿಗೆ ಸೋಲಿನ ಆಘಾತವುಣಿಸಿದ ಎರಡನೇ ಸೀಡ್ ಕಾರ್ಲೋಸ್ ಅಲ್ಕರಾಜ್ ಈ ಸಲದ ಯು.ಎಸ್. ಓಪನ್ ಪುರುಷರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರಲ್ಲದೇ, ವಿಶ್ವದ ಅಗ್ರ ಆಟಗಾರನ `ಪಟ್ಟ’ಕ್ಕೆ ಮರಳಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಇಟಲಿಯ ಸಿನ್ನರ್ ಎದುರು ನಾಲ್ಕು ಸೆಟ್‌ಗಳಲ್ಲಿ 6-2, 3-6, 6-1, 6-4 ರಿಂದ ಜಯಿಸಿದ ಅಲ್ಕರಾಜ್, ತಮ್ಮ ಜೀವನದ ಒಟ್ಟಾರೆ ಆರನೇ ಹಾಗೂ ಯು.ಎಸ್. ಓಪನ್‌ನಲ್ಲಿ ಎರಡನೇ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ತಮ್ಮಿಬ್ಬರ ನಡುವಿನ 15ನೇ ಹಾಗೂ ಸತತ ಮೂರನೇ ಗ್ರ್ಯಾನ್-ಸ್ಲಾಮ್ ಫೈನಲ್‌ನಲ್ಲಿ ಪಾರಮ್ಯ ಮೆರೆದ 22 ವರ್ಷ ವಯಸ್ಸಿನ ಅಲ್ಕರಾಜ್, ಎರಡು ತಾಸು 42 ನಿಮಿಷಗಳ ಆಟದಲ್ಲಿ ವಿಜಯಶಾಲಿಯಾಗಿ, ಪ್ರಶಸ್ತಿಯ ಮೇಲೆ ತಮ್ಮ ಹೆಸರು ಬರೆಯಿಸಿಕೊಂಡರು.

2024ರ ಪ್ರಾರಂಭದಿಂದಲೂ ವಿಶ್ವದ ಪ್ರಮುಖ ಟೂರ್ನಿಗಳಲ್ಲಿ ಹಿರಿಮೆ ಮೆರೆದಿರುವ ಅಲ್ಕರಾಜ್ ಹಾಗೂ ಸಿನ್ನರ್, ಕೊನೆಯ ಎಂಟರ ಪೈಕಿ ಪ್ರತಿಯೊಂದನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಕೊನೆಯ ಎಂಟು ಮುಖಾಮುಖಿಗಳ ಪೈಕಿ ಏಳನ್ನು ಹಾಗೂ ಕೊನೆಯ ಆರು ಫೈನಲ್‌ಗಳ ಪೈಕಿ ಐದನ್ನು ಜಯಿಸಿರುವ ಸ್ಪ್ಯಾನಿಷ್ ಆಟಗಾರ 2025ರಲ್ಲಿಯ ಮೂರು ಪ್ರಮುಖ ಟೂರ್ನಿಗಳ ಫೈನಲ್‌ಗಳ ಪೈಕಿ ಎರಡರಲ್ಲಿ ಗೆಲುವಿನ ಕೇಕೆ ಹಾಕಿದ್ದಾರೆ.

ಮರಳಿ ನಂಬರ್ 1: ಯು.ಎಸ್. ಓಪನ್‌ನಲ್ಲಿಯ ಗೆಲುವು ಅಲ್ಕರಾಜ್ ಅವರನ್ನು ಟೆನಿಸ್ ಇತಿಹಾಸದಲ್ಲಿಯೇ ಆರು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡ ಎರಡನೇ ಅತ್ಯಂತ ಕಿರಿಯ ಪುರುಷ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನನ್ನಾಗಿಸಿತಲ್ಲದೇ ಎ.ಟಿ.ಪಿ. ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿಸಿತು. ಅವರು ವಿಶ್ವದ ನಂಬರ 1ನೇ ಸ್ಥಾನಕ್ಕೆ ಮರಳುತ್ತಿರುವುದು 2023ರ ಸಪ್ಟಂಬರ್‌ನ ನಂತರ ಇದೇ ಮೊದಲು.

ಇದಲ್ಲದೇ ಹಾರ್ಡ್ ಕೋರ್ಟ್, ಮಣ್ಣಿನಂಕಣ ಹಾಗೂ ಹುಲ್ಲಿನಂಕಣಗಳ ಮೇಲೆ ತಲಾ ಎರಡೆರಡು ಪ್ರಶಸ್ತಿ ಬಾಚಿಕೊಂಡಿರುವ ಅಲ್ಕರಾಜ್, ಎಲ್ಲ ಮೂರೂ ಅಂಕಣಗಳ ಮೇಲೆ ಪ್ರಮುಖ ಪ್ರಶಸ್ತಿ ಗೆದ್ದಿರುವ ವಿಶ್ವದ ಕೇವಲ ನಾಲ್ಕನೇ ಆಟಗಾರನೆನಿಸಿಕೊಂಡರು. ನೋವಾಕ್ ಜೊಕೋವಿಚ್, ರಫೇಲ್ ನಡಾಲ್ ಹಾಗೂ ಮ್ಯಾಟ್ಸ್ ವಿಲಾಂಡರ್ ಮಾತ್ರ ಇದುವರೆಗೆ ಈ ಸಾಧನೆಗೈದಿದ್ದರು.

ಭಾನುವಾರಕ್ಕಿಂತಲೂ ಮೊದಲು ಹಾರ್ಡ್ ಕೋರ್ಟ್ಗಳ ಮೇಲೆ ಸತತ 27 ಪಂದ್ಯಗಳನ್ನು ಜಯಿಸಿದ್ದ ಸಿನ್ನರ್, `ಮುಕ್ತ ಯುಗ’ದಲ್ಲಿ ಒಂದೇ ಋತುವಿನಲ್ಲಿ ಮೂರು ಗ್ರ್ಯಾನ್-ಸ್ಲಾಮ್ ಪ್ರಶಸ್ತಿಗಳನ್ನು ಬಾಚಿಕೊಂಡ ಕೇವಲ ಏಳನೇ ಆಟಗಾರನಾಗಬೇಕೆಂಬ ಕನಸು ಕಂಡಿದ್ದರು.

ಒಂದೇ ಋತುವಿನಲ್ಲಿ ಎಲ್ಲ ನಾಲ್ಕೂ ಪ್ರಮುಖ ಟೂರ್ನಿಗಳ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕೊನೆಯ 10 ವಿಜೇತರು
2016- ಸ್ಟಾನ್ ವಾವ್ರಿಂಕಾ
2017- ರಫೇಲ್ ನಡಾಲ್
2018- ನೋವಾಕ್ ಜೊಕೋವಿಚ್
2019- ರಫೇಲ್ ನಡಾಲ್
2020- ಡಾಮಿನಿಕ್ ಥಿಯೆಮ್
2021- ಡೆನಿಲ್ ಮೆಡ್ವೆಡೆವ್
2022- ಕಾರ್ಲೋಸ್ ಅಲ್ಕರಾಜ್
2023- ನೋವಾಕ್ ಜೊಕೋವಿಚ್
2024- ಯಾನಿಕ್ ಸಿನ್ನರ್
2025- ಕಾರ್ಲೋಸ್ ಅಲ್ಕರಾಜ್

Previous articleಸೋಷಿಯಲ್ ಮೀಡಿಯಾ ನಿಷೇಧ: ನೇಪಾಳದಲ್ಲಿ `ಜೆನ್ ಝೀ’ ದಂಗೆ
Next articleಸಿದ್ದು ಪ್ರೇರಿತ ಟಿಪ್ಪು ಗ್ಯಾಂಗ್‌ನಿಂದ ರಾಜ್ಯಾದ್ಯಂತ ದುಷ್ಕೃತ್ಯ – ಅಶೋಕ

LEAVE A REPLY

Please enter your comment!
Please enter your name here