ದುಬೈ: ಸೂಪರ್ 4 ಹಂತದ ರೋಚಕ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ಕ್ರಿಕೆಟ್ ತಂಡ ಸೂಪರ್ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು. ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿದ್ದರಿಂದ ಪಂದ್ಯ ಟೈ ಕಂಡಿತು.
ಲಂಕಾ ಪರ ಓಪನರ್ ಪಾಥುಮ್ ನಿಸ್ಸಾಂಕ 107 ರನ್, ಕುಸಾಲ್ ಪೆರೆರಾ 58, ದಸುನ್ ಶನಕಾ ಅಜೇಯ 22 ರನ್ ಗಳಿಸಿದರು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ವೇಗಿ ಅರ್ಷದೀಪ್ ದಾಳಿಗೆ ತತ್ತರಿಸಿ 2 ವಿಕೆಟ್ ನಷ್ಟಕ್ಕೆ 2 ರನ್ ಗಳಿಸಿತು. ವೇಗಿ ಅರ್ಷದೀಪ್ 2 ವಿಕೆಟ್ ಪಡೆದರು.ಭಾರತ ತಂಡದ ನಾಯಕ ಸೂರ್ಯ ಕುಮಾರ್ ಮೊದಲ ಎಸೆತದಲ್ಲೇ 3 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಸರದಾರ ಎನ್ನಿಸಿಕೊಂಡಿದ್ದ ಆರಂಭಿಕ ಆಟಗಾರ ಹಾಗೂ ಉಪನಾಯಕ ಶುಭಮನ್ ಗಿಲ್ ಈ ಏಷ್ಯಾಕಪ್‌ನಲ್ಲಿ ನೀರಸ ಬ್ಯಾಟಿಂಗ್ ಅನ್ನು ಮುಂದುವರೆಸಿ, ಲಂಕಾ ವಿರುದ್ಧವೂ ಕೇವಲ 4 ರನ್‌ಗಳಿಗೆ ವಿಕೆಟ್ ನೀಡಿದರು. ಅಷ್ಟೇ ಅಲ್ಲದೇ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಈ ಟೂರ್ನಿಯಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸಲಾಗಲಿಲ್ಲ.
ಶುಕ್ರವಾರವೂ ಕೂಡ ಸೂರ್ಯ 13 ಎಸೆತಗಳಲ್ಲಿಗಳಿಸಿದ್ದು ಕೇವಲ 12 ರನ್. ಸ್ಪಿನ್ನರ್ ವನಿಂಧು ಹಸರಂಗಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದ, ನಾಯಕ, ಪೆವಿಲಿಯನ್‌ಗೆ ಹಿಂದಿರುಗಿದರು. ಇದಾದ ಬಳಿಕ 61 ರನ್‌ಗಳಿಸಿದ ಅಭಿಷೇಕ್ ಶರ್ಮಾ ಕೂಡ ಅಸಲಂಕಾಗೆ ವಿಕೆಟ್ ನೀಡಿ ಹೊರ ನಡೆದರು.
ಅಭಿಷೇಕ್ ದಾಖಲೆ: ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 61 ರನ್‌ಗಳಿಸಿದ್ದಲ್ಲದೇ ಈ ಟೂರ್ನಿಯಲ್ಲಿ ಒಟ್ಟು 307 ರನ್‌ಗಳಿಸಿದ್ದಾರೆ. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ಆಡಿದ ಒಂದು ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧನೆಗೆ ಒಳಗಾದರು.
ಸಂಜು-ತಿಲಕ್ 66 ರನ್ ಜೊತೆಯಾಟ: ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಮಾತ್ರ ಲಂಕಾ ಬೌಲರ್‌ಗಳ ಎದುರು ಬಹುಬೇಗನೇ ರನ್ ಸಾಧಿಸುತ್ತಾ ಸಾಗಿದರು. ಇದರಿಂದ, ಭಾರತ 15 ಓವರ್‌ಗಳಲ್ಲಿ 150ರ ಗಡಿ ತಲುಪಿತು.
ಈ ವೇಳೆ 4 ರನ್‌ಗಳ ಅಂತರದಲ್ಲಿ 39 ರನ್‌ಗಳಿಸಿದ್ದ ಸಂಜು ಹಾಗೂ 2 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ ಅಜೇಯರಾಗಿ ಉಳಿದುಕೊಂಡರೂ ಕೇವಲ 1 ರನ್‌ನಿಂದ ಅರ್ಧಶತಕದಿಂದ ವಂಚಿತರಾದರು. ಬ್ಲಾಗ್ ಓವರ್‌ಗಳಲ್ಲಿ ಅಕ್ಷರ್ ಪಟೇಲ್ 21 ರನ್‌ಗಳಿಸಿದ್ದರಿಂದ ಭಾರತ ಇನ್ನೂರರ ಗಡಿ ದಾಟಿತು.
ಸಂಕ್ಷಿಪ್ತ ಸ್ಕೋರ್: ಭಾರತ 5 ವಿಕೆಟ್‌ಗೆ 202 ರನ್. ಅಭಿಷೇಕ 61(31) ಶುಭಮನ್ ಗಿಲ್ 04(03) ಸಂಜು 39(23) ಹಾರ್ದಿಕ್ ಪಾಂಡ್ಯ 02(03), ಅಕ್ಷರ್ (ಅಜೇಯ) 21(15).