ಏಷ್ಯಾ ಕಪ್ 2025: ಭಾರತ ತಂಡದ ಆಟಗಾರರ ಪಟ್ಟಿ

0
42

ಏಷ್ಯಾ ಕಪ್ 2025. ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾ ಕಪ್ ಕ್ರಿಕೆಟ್ T-20 ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಸೆಪ್ಟೆಂಬರ್ 10ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿರುವ ಭಾರತ, ನಂತರ ಸೆ. 14ರಂದು ಪಾಕಿಸ್ತಾನ ಮತ್ತು ಸೆ. 19ರಂದು ಒಮಾನ್ ವಿರುದ್ಧ ಸೆಣಸಾಡಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯ ಕುಮಾರ್, ತಂಡದಲ್ಲಿ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ ಮತ್ತು ಲಯದಲ್ಲಿರುವ ತಂಡವನ್ನೇ ಮುಂದುವರಿಸಲಾಗುವುದು ಎಂದು ತಿಳಿಸಿದರು. ಯುವ ಹಾಗೂ ಅನುಭವಿ ಆಟಗಾರರ ಸಮತೋಲನ ಹೊಂದಿರುವ ಭಾರತ ತಂಡವು ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ.

ಬ್ಯಾಟಿಂಗ್ ವಿಭಾಗ: ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಾಯಕ ಸೂರ್ಯ ಕುಮಾರ್ ಯಾದವ್ ಅವರಂತಹ ಪ್ರತಿಭಾನ್ವಿತ ಬ್ಯಾಟರ್‌ಗಳನ್ನು ತಂಡ ಹೊಂದಿದೆ. ಉಪನಾಯಕ ಗಿಲ್ ಅವರ ಸ್ಥಾನ ಭದ್ರವಾಗಿದ್ದು, ಅವರೊಂದಿಗೆ ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

T-20ಯಲ್ಲಿ ಅಗ್ರ ಶ್ರೇಯಾಂಕದಲ್ಲಿರುವ ಅಭಿಷೇಕ್ ಶರ್ಮಾ ಅಥವಾ ಉತ್ತಮ ಲಯದಲ್ಲಿರುವ ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಇದೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಸಂಭವವಿದೆ. ರಿಂಕು ಸಿಂಗ್ ಮತ್ತು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಸಹ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗ: ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರಂತಹ ಅನುಭವಿ ಆಲ್‌ರೌಂಡರ್‌ಗಳು ತಂಡಲ್ಲಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಜಸ್ಪ್ರಿತ್ ಬುಮ್ರಾ ಮುಂದಾಳತ್ವ ವಹಿಸಲಿದ್ದು, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಅವರ ಬೆಂಬಲ ಇರಲಿದೆ.

ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಜೊತೆಗೆ ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್ ಅವರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಯಿದೆ. ಕೋಚ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಆಡುವ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡುವುದು ಒಂದು ಸವಾಲಾಗಿದೆ. ಆದರೆ, ಭಾರತ ತಂಡವು ಈ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.

ಸಂಭವನೀಯ ತಂಡ: ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ಜಸ್ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್.

Previous articleಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಚುನಾವಣೆ, ಜಾರಕಿಹೊಳಿಯವರ ಸಂಧಾನ ರಾಜಕೀಯ
Next articleಕೇಂದ್ರ ಸಚಿವರ ಹೆಸರಲ್ಲಿ ರಾಜ್ಯಪಾಲ ಗೆಹ್ಲೋಟ್‌ಗೆ ಕರೆ, ವಂಚನೆಗೆ ಯತ್ನ

LEAVE A REPLY

Please enter your comment!
Please enter your name here