ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವದ ವಿಚಾರಕ್ಕೆ ಅಂತಿಮ ತೆರೆ ಬಿದ್ದಿದೆ. ಬಹುಕಾಲದಿಂದ ಕುತೂಹಲಕ್ಕೆ ಕಾರಣವಾಗಿದ್ದ ಈ ಒಪ್ಪಂದವನ್ನು ಅಪೊಲೊ ಟೈಯರ್ಸ್ ಪಡೆದುಕೊಂಡಿದ್ದು, ಮುಂದಿನ ಮೂರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಜರ್ಸಿ ಪ್ರಾಯೋಜಕರಾಗಲಿದೆ.
ಬಿಸಿಸಿಐ (BCCI) ಮೂಲಗಳ ಪ್ರಕಾರ, 579 ಕೋಟಿ ರೂಪಾಯಿಗಳ ಭಾರೀ ಬಿಡ್ ಮೂಲಕ ಅಪೊಲೊ ಟೈಯರ್ಸ್, ಕಾನ್ವಾ (Canva) ಮತ್ತು ಜೆಕೆ ಟೈಯರ್ (JK Tyre) ಸೇರಿದಂತೆ ಇನ್ನಿತರ ಸ್ಪರ್ಧಿಗಳನ್ನು ಮೀರಿಸಿ ಈ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದಿದೆ.
ಒಪ್ಪಂದದ ಅವಧಿ ಮತ್ತು ವ್ಯಾಪ್ತಿ: ಈ ಒಪ್ಪಂದವು ಮೂರು ವರ್ಷಗಳ ಕಾಲ ಜಾರಿಯಲ್ಲಿದ್ದು, 121 ದ್ವಿಪಕ್ಷೀಯ ಪಂದ್ಯಗಳು ಹಾಗೂ 21 ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪಂದ್ಯಗಳು ಇದರ ಒಳಗಾಗಿವೆ. ಇದರೊಂದಿಗೆ ಅಪೊಲೊ ಟೈಯರ್ಸ್ ಹೆಸರು ಜಾಗತಿಕ ಮಟ್ಟದಲ್ಲಿ ಪ್ರಸಾರವಾಗುವ ಭಾರತೀಯ ಕ್ರಿಕೆಟ್ ಜರ್ಸಿಯೊಂದಿಗೆ ಅಚ್ಚಳಿಯದ ನಂಟನ್ನು ಹೊಂದುತ್ತದೆ.
ಕ್ರಿಕೆಟ್ – ಕಾರ್ಪೊರೇಟ್ ಜಗತ್ತಿನ ಸೇತುವೆ: ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವವು ಕ್ರೀಡಾ ಮಾರುಕಟ್ಟೆಯ ಅತ್ಯಂತ ಹಾಟ್ ಡೀಲ್‌ಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಇದು ಬ್ರ್ಯಾಂಡ್‌ಗೆ ಅಸಾಧಾರಣ ಜಾಗತಿಕ ಪರಿಣಾಮ ನೀಡುತ್ತದೆ. ಅಪೊಲೊ ಟೈಯರ್ಸ್‌ನ ಈ ನಡೆ ಕಂಪನಿಯ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವುದರ ಜೊತೆಗೆ, ಭಾರತದ ಅತಿ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್‌ಗೆ ಅವರ ಬದ್ಧತೆಯನ್ನು ತೋರಿಸುತ್ತದೆ.
ವಿಶ್ಲೇಷಕರ ಅಭಿಪ್ರಾಯದಂತೆ, ಈ ಒಪ್ಪಂದವು ಕ್ರೀಡಾ ಜಗತ್ತಿಗಷ್ಟೇ ಸೀಮಿತವಲ್ಲದೆ, ಕಾರುಪೊರೇಟ್ ಕ್ಷೇತ್ರದಲ್ಲಿಯೂ ಚರ್ಚೆಗೆ ಗ್ರಾಸವಾಗಲಿದೆ. ಬ್ರ್ಯಾಂಡ್ ಮತ್ತು ಕ್ರಿಕೆಟ್ ಅಭಿಮಾನಿಗಳ ನಡುವೆ ನಂಟು ಬೆಳೆಸುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ.
ಅಧಿಕೃತ ಪ್ರತಿಕ್ರಿಯೆಗಳು: ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಉನ್ನತಾಧಿಕಾರಿ, “ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ದೊಡ್ಡ ವೇದಿಕೆ. ಅಪೊಲೊ ಟೈಯರ್ಸ್‌ನ ಸೇರ್ಪಡೆ ಕ್ರೀಡೆ ಹಾಗೂ ವ್ಯವಹಾರ ಎರಡಕ್ಕೂ ಲಾಭಕಾರಿ ಆಗಲಿದೆ” ಎಂದು ಹೇಳಿದರು.