ನವದೆಹಲಿ: 2030ರ ಪ್ರತಿಷ್ಠಿತ ಕಾಮನ್‌ವೆಲ್ತ್ ಆತಿಥ್ಯದ ಹಕ್ಕನ್ನು ಅಧಿಕೃತವಾಗಿ ಭಾರತಕ್ಕೆ ನೀಡಲಾಗಿದೆ. ಬುಧವಾರ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಾಮಾನ್ಯ ಸಭೆಯಲ್ಲಿ ಅಹಮದಾಬಾದ್‌ಗೆ ಆತಿಥ್ಯದ ಹಕ್ಕನ್ನು ನೀಡಲಾಯಿತು.
ಭಾರತ ಅಥ್ಲೀಟ್‌ನ ದಂತಕತೆ ಹಾಗೂ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ. ಉಷಾ ಆತಿಥ್ಯದ ಹಕ್ಕನ್ನು ಪಡೆದರು. ಇದರೊಂದಿಗೆ ಎರಡು ದಶಕಗಳ ಬಳಿಕ ಭಾರತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆ.
2010ರಲ್ಲಿ ಕೊನೆಯ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು. ಕಳೆದ ತಿಂಗಳು ಕಾಮನ್‌ವೆಲ್ತ್ ಕ್ರೀಡಾಕೂಟದ ಕಾರ್ಯನಿರ್ವಾಹಕರ ಮಂಡಳಿಯ 74 ಸದಸ್ಯರು ಭಾರತಕ್ಕೆ ಕ್ರೀಡಾಕೂಟದ ಆತಿಥ್ಯದ ಹಕ್ಕನ್ನು ನೀಡಬೇಕೆಂದು ಶಿಫಾರಸ್ಸು ಮಾಡಿದ್ದರು.
ಕೆನಡಾದ ಹ್ಯಾಮಿಲ್ಟನ್‌ನಲ್ಲಿ 1930 ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದು 100 ವರ್ಷಗಳು ಗತಿಸಿದ್ದು, 2030ರ ಕಾಮನ್‌ವೆಲ್ತ್ ಕ್ರೀಡಾಕೂಟವು ಒಂದು ಐತಿಹಾಸಿಕ ಮೈಲಿಗಲ್ಲಾಗಲಿದೆ. ಇನ್ನು 2036ರ ಒಲಿಂಪಿಕ್ ಕ್ರೀಡಾಕೂಟದ ಆಯೋಜನೆಗೆ ಭಾರತ ಈಗಾಗಲೇ ಬಿಡ್ ಸಲ್ಲಿಸಿದೆ.
ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ಭಾರತಕ್ಕೆ ಆಯೋಜಿಸುವ ಅವಕಾಶ ಸಿಕ್ಕಿದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.


























