ನವದೆಹಲಿ: ಸಚಿನ್ ತೆಂಡೂಲ್ಕರ್ ಅವರನ್ನು ಮತದಾರರ ಜಾಗೃತಿ ಮತ್ತು ಶಿಕ್ಷಣಕ್ಕಾಗಿ ಭಾರತೀಯ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಎಂದು ಬುಧವಾರ ಗುರುತಿಸಲಾಗಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತೆಂಡೂಲ್ಕರ್ ಮೂರು ವರ್ಷಗಳ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿ ಮಾತನಾಡಿದ ಅವರು “ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಮತ್ತು ನಮ್ಮ ಮತದಾನದ ಹಕ್ಕನ್ನು ಸರಿಯಾದ ಶ್ರದ್ಧೆಯಿಂದ ಚಲಾಯಿಸುವುದು ನಮ್ಮ ಪ್ರಧಾನ ಜವಾಬ್ದಾರಿಯಾಗಿದೆ. ಇದು ನಿರ್ಲಕ್ಷ್ಯ ಮಾಡಲಾಗದ ಜವಾಬ್ದಾರಿಯಾಗಿದೆ. ಚುನಾವಣೆಗಳು ಯಾವಾಗ ನಡೆಯುತ್ತವೆ ಮತ್ತು ಯಾವಾಗ ಹೋಗಿ ಮತ ಚಲಾಯಿಸಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು, “ಭಾರತವು ವಿಶ್ವದ ಅತ್ಯಂತ ಯುವ ವಯಸ್ಸಿನ ರಾಷ್ಟ್ರವಾಗಿದೆ. ಮತದಾನದ ವಿಷಯಕ್ಕೆ ಬಂದಾಗ ನಾವು ವಿಶ್ವದಲ್ಲಿ ಜವಾಬ್ದಾರಿಯುತ ರಾಷ್ಟ್ರ ಎಂದು ಹೇಳಬಹುದೇ? ಇದಕ್ಕೆ ಪ್ರಾಮಾಣಿಕ ಉತ್ತರ ಇಲ್ಲ. ಒಬ್ಬ ಭಾರತೀಯನಾಗಿ, ಭಾರತವು ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಜನರಿರುವ ರಾಷ್ಟ್ರ ಎಂದು ಹೇಳಲು ನಾನು ಬಯಸುತ್ತೇನೆ ಆದರೆ ಮತ ಚಲಾಯಿಸುವ ವಿಷಯಕ್ಕೆ ಬಂದಾಗ ವಿಶ್ವದ ಅತ್ಯಂತ ಜವಾಬ್ದಾರಿಯುತ ರಾಷ್ಟ್ರವಾಗಬೇಕಿದೆ” ಎಂದರು. ಕಳೆದ ವರ್ಷ ಆಯೋಗವು ಖ್ಯಾತ ನಟ ಪಂಕಜ್ ತ್ರಿಪಾಠಿ ಅವರನ್ನು ರಾಷ್ಟ್ರೀಯ ಐಕಾನ್ ಎಂದು ಗುರುತಿಸಿತ್ತು. ಈ ಹಿಂದೆ, 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಎಂಎಸ್‌ಧೋನಿ, ಅಮೀರ್ ಖಾನ್ ಮತ್ತು ಮೇರಿ ಕೋಮ್ ಅವರಂತಹ ದಿಗ್ಗಜರು ಚುನಾವಣಾ ಸಮಿತಿಯ ರಾಷ್ಟ್ರೀಯ ಐಕಾನ್‌ಗಳಾಗಿದ್ದರು.