ನ್ಯೂಯಾರ್ಕ್: ಯುಎಸ್‌ಓಪನ್‌ನಲ್ಲಿ ಮೊದಲ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಕನಸು ಕಂಡಿದ್ದ ರೋಹನ್ ಬೋಪಣ್ಣ ನಿರಾಸೆ ಅನುಭವಿಸಿದರು. ಈ ಪಂದ್ಯಾವಳಿಯಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ದ ಬೋಪಣ್ಣ ಈ ಬಾರಿಯೂ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ಶುಕ್ರವಾರ ತಡರಾತ್ರಿ ಇಲ್ಲಿ ನಡೆದ ೨೦೨೩ರ ಯುಎಸ್ ಫೈನಲ್‌ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ೩ನೇ ಶ್ರೇಯಾಂಕದ ಅಮೆರಿಕದ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ ೬-೨, ೩-೬, ೪-೬ ಸೆಟ್‌ಗಳ ಅಂತರದಲ್ಲಿ ಸೋಲು ಕಂಡರು. ಮೊದಲ ಸೆಟ್ ಗೆದ್ದು, ಪ್ರಶಸ್ತಿ ಗೆಲ್ಲುವ ಆಸೆ ಈಡೆರಲಿಲ್ಲ. ನಂತರದ ಎರಡು ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಸಾಲಿಸ್‌ಬರಿ ಮತ್ತು ರಾಜೀವ್ ರಾಮ್ ಸತತ ಎರಡು ಸೆಟ್ ಗೆದ್ದು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಬೋಪಣ್ಣ ಯುವ ಆಟಗಾರರಿಗೆ ಸೋಲಿನ ರುಚಿ ತೋರಿಸಿದ್ದರು. ರೋಹನ್ ಬೋಪಣ್ಣ ಅವರು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಬೋಪಣ್ಣ-ಎಬ್ಡೆನ್ ಜೋಡಿ ಇದೇ ಸಾಲಿನಲ್ಲಿ ನಡೆದಿದ್ದ ವಿಂಬಲ್ಡನ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು.