ಸುರಕ್ಷಿತ ಚಿಕಿತ್ಸೆಗೊಂದು ರಕ್ಷಾಕವಚ: ಅರಿವ ಮರೆಸುವ ಅರಿವಳಿಕೆ

0
23

ಅ. 16: ವಿಶ್ವ ಅರಿವಳಿಕೆ ದಿನ (ಭಾನುವಾರ (12-10-2025) ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ಲೇಖನ)

ಅರಿವಳಿಕೆ (ಅನೇಸ್ತೇಷಿಯಾ) ಎಂದರೆ, ಸಾಮಾನ್ಯವಾಗಿ ಶಸ್ತçಚಿಕಿತ್ಸೆಯ ಸಂದರ್ಭದಲ್ಲಿ ಬಳಸುವಂಥದ್ದು ಎಂಬುದು ಬಹುತೇಕ ಜನರ ಪ್ರಾಥಮಿಕ ತಿಳಿವಳಿಕೆ. ಆದರೆ ಇದರ ಬಳಕೆಯ ವ್ಯಾಪ್ತಿ ವಿಸ್ತಾರವಾದುದು. ಇದರ ಹಿನ್ನೆಲೆ-ಮುನ್ನೆಲೆಗಳ ಪಕ್ಷಿನೋಟ ಇಲ್ಲಿದೆ.

ಡಾ. ಗೋವಿಂದ ಹೆಗಡೆ, ಹುಬ್ಬಳ್ಳಿ

1846ರ ಅಕ್ಟೋಬರ್ 16 – ಮಾನವ ಇತಿಹಾಸದಲ್ಲಿ ಒಂದು ವಿಶೇಷ ದಿನ. ಮನುಷ್ಯನು ನೋವನ್ನು (ತಾತ್ಕಾಲಿಕವಾಗಿ) ನಿವಾರಿಸಲು, ಶಮನಗೊಳಿಸಲು, ಅರಿವಿಗೆ ಬರದಂತೆ ಮಾಡಲು ಯಶಸ್ವಿಯಾದ ದಿನ.

ಹೌದು, ಇದೇ ಅರಿವಳಿಕೆ ದಿನ. ಇತಿಹಾಸಪೂರ್ವದಿಂದಲೂ ಮನುಷ್ಯ ತನ್ನ ಬೇನೆ, ಕಾಯಿಲೆ, ನೋವುಗಳ ಪರಿಹಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾನೆ. ಹಲವು ಬಗೆಯ ಗಿಡಮೂಲಿಕೆಗಳು ಇನ್ನಿತರ ವಸ್ತುಗಳ ಪ್ರಯೋಗವನ್ನು ಮಾಡಿದ್ದಾನೆ. ಅಫೀಮು ಮೊದಲಾದ ಅಮಲೇರಿಸುವ ವಸ್ತುಗಳು ತಾತ್ಕಾಲಿಕವಾಗಿ ನೋವಿನಿಂದ ಶಮನವನ್ನು ನೀಡುವುದನ್ನು ಕಂಡುಕೊಂಡಿದ್ದಾನೆ. ಅವುಗಳನ್ನು ಪ್ರಯೋಗಿಸಿ, ಚಿಕ್ಕಪುಟ್ಟ ಶಸ್ತ್ರಕ್ರಿಯೆಗಳನ್ನು ಮಾಡುವುದನ್ನು ಕೂಡ ಹಲವು ನಾಗರಿಕತೆಗಳಲ್ಲಿ ಕಾಣುತ್ತೇವೆ. ಈ ಎಲ್ಲ ಪ್ರಯತ್ನಗಳಿಗೆ ಒಂದು ಸ್ಪಷ್ಟವಾದ ವೈಜ್ಞಾನಿಕ ರೂಪ ಸಿಕ್ಕಿದ್ದು 1846ರಲ್ಲಿ.

ಬಾಸ್ಟನ್‌ನ ಮೆಸಾಚುಸೆಟ್ಸ್ ಆಸ್ಪತ್ರೆಯಲ್ಲಿ ವಿಲಿಯಂ ಥಾಮಸ್ ಗ್ರೀನ್ ಮಾರ್ಟನ್ ಎಂಬ ದಂತವೈದ್ಯ, ಈಥರ್ ಎಂಬ ರಾಸಾಯನಿಕವನ್ನು ರೋಗಿಯು ಉಸಿರಿನ ಮೂಲಕ ಸೇವಿಸುವಂತೆ ಮಾಡಿ, ಅರಿವಳಿಕೆಯ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದ. ಬಾಸ್ಟನ್ನಿನ ವೈದ್ಯರ ದಂಡೇ ಅಲ್ಲಿ ನೆರೆದಿತ್ತು. ಅವರ ಸಮ್ಮುಖದಲ್ಲಿ ಜಾನ್ ವಾರನ್ ಎಂಬ ಹಿರಿಯ ಶಸ್ತ್ರಚಿಕಿತ್ಸಕ, ಅಬ್ಬಾಟ್ ಎಂಬ ರೋಗಿಯ ದವಡೆಯ ಕೆಳಗಡೆ ಇದ್ದ ಗಂಟೊಂದನ್ನು ಕತ್ತರಿಸಿ ತೆಗೆದ.

ಆವರೆಗಿನ ಇಂಥ ಶಸ್ತ್ರಕ್ರಿಯೆಗಳಲ್ಲಿ ರೋಗಿಯಾದವನು ನೋವಿನಿಂದ ಅರಚುವುದು ಸಹಜವೂ ಸಾಮಾನ್ಯವೂ ಆಗಿತ್ತು. ಕೈಕಾಲುಗಳನ್ನು ಹಿಡಿದು ರೋಗಿಯನ್ನು ನಿಯಂತ್ರಿಸಲು ದಾಂಡಿಗರ ನೆರವು ಪಡೆಯುವುದು ಕೂಡ ಅನಿವಾರ್ಯವಾಗಿತ್ತು! ಆದರೆ ಅರಿವಳಿಕೆಯನ್ನು ಪಡೆದ ಈ ರೋಗಿಗೆ ಯಾವುದೇ ನೋವಿನ ಅನುಭವವಾದಂತೆ ಇರಲಿಲ್ಲ. ಅವನು ಪ್ರಜ್ಞಾವಸ್ಥೆಯಲ್ಲಿ ಇರುವಂತೆ ಕಾಣಲಿಲ್ಲ. (ಕೆಲವು ನಿಮಿಷಗಳ ಕಾಲ ರೋಗಿ ಈ ಅವಸ್ಥೆಯಲ್ಲಿದ್ದ. ನಿಧಾನವಾಗಿ ಆತ ಪ್ರಜ್ಞಾವಸ್ಥೆಗೆ ಮರಳಿದನಾದರೂ ಆತನಿಗೆ ಶಸ್ತ್ರಕ್ರಿಯೆಯ ನೋವಿನ ನೆನಪು ಇರಲಿಲ್ಲ).

ಈ ವ್ಯತ್ಯಾಸವನ್ನು ಕೂಡಲೇ ಗ್ರಹಿಸಿದ ವಾರನ್ `ಗೆಳೆಯರೇ, ಇದು ಕಣ್ಕಟ್ಟಲ್ಲ’ ಎಂದು ಘೋಷಿಸುವ ಮೂಲಕ ಅರಿವಳಿಕೆ ನಿಜಕ್ಕೂ ಪರಿಣಾಮಕಾರಿಯಾಗಿ ಇರುವುದನ್ನು ದೃಢೀಕರಿಸಿದ. ಕೆಲವೇ ತಿಂಗಳುಗಳಲ್ಲಿ ಈ ಅರಿವಳಿಕೆಯ ಸುದ್ದಿ, ಅದನ್ನು ಪ್ರಯೋಗಿಸುವ ವಿಧಾನಗಳೆಲ್ಲ ಜಗತ್ತಿನ ವಿವಿಧ ಭಾಗಗಳಿಗೆ ಪಸರಿಸಿದವು.

ಈ ಪುಟ್ಟ ಆರಂಭದ ನಂತರ ಅರಿವಳಿಕೆ ವಿಜ್ಞಾನವು ನಾಗಾಲೋಟದಲ್ಲಿ ಬೆಳೆದುಬಂದದ್ದನ್ನು, ವಿವಿಧ ಔಷಧಗಳು, ಸಲಕರಣೆಗಳ ಆವಿಷ್ಕಾರವಾದುದನ್ನು ಕಾಣುತ್ತೇವೆ. ಆಧುನಿಕ ತಂತ್ರಜ್ಞಾನ ಬೆಳೆದಂತೆ, ಹೆಚ್ಚುಹೆಚ್ಚು ಪರಿಷ್ಕ್ರತವಾದ ಉಪಕರಣಗಳು, ಸುರಕ್ಷಿತ ಔಷಧಗಳು, ಅರಿವಳಿಕೆಯ ಆಧುನಿಕ ತರಬೇತಿಗಳು ಇವುಗಳಿಂದಾಗಿ, ತುಂಬ ಸಂಕೀರ್ಣವಾದ ಶಸ್ತ್ರಕ್ರಿಯೆಗಳನ್ನು ಕೂಡ ನಿರ್ವಹಿಸಲು, ಇಂದಿನ ಅರಿವಳಿಕೆ ತಜ್ಞರು ಸಮರ್ಥರಾಗಿದ್ದಾರೆ.

ಅರಿವಳಿಕೆಯ ವಿಧಗಳು : ಸ್ಥೂಲವಾಗಿ ಅರಿವಳಿಕೆಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ಸಂಪೂರ್ಣ ಅರಿವಳಿಕೆ (ಜನರಲ್ ಅನಸ್ತೇಶಿಯಾ). ಈ ಕ್ರಮದಲ್ಲಿ ವ್ಯಕ್ತಿ ಬಾಹ್ಯ ಜಗತ್ತಿನ ಅರಿವನ್ನು ಪೂರ್ಣವಾಗಿ ಕಳೆದುಕೊಂಡಿರುತ್ತಾನೆ. ಸ್ಪರ್ಶ, ನೋವು ಈ ಎಲ್ಲವುಗಳ ಗ್ರಹಿಕೆಯನ್ನು ಕಳೆದುಕೊಂಡಿರುತ್ತಾನೆ. ಎಚ್ಚರ ಬಂದ ನಂತರ ಆ ನಡುವಿನ ಅವಧಿಯ ಯಾವುದೇ ಸಂಗತಿಯ ನೆನಪೂ ಇರುವುದಿಲ್ಲ (ಆಮ್ನೇಸಿಯಾ).

ಎರಡನೆಯದು, ಪ್ರಾಂತೀಯ ಅರಿವಳಿಕೆ (ರೀಜನಲ್ ಅನಸ್ತೇಶಿಯಾ). ಇದು ದೇಹದ ಒಂದು ಪುಟ್ಟ ಭಾಗವನ್ನು ಸ್ಥಳೀಯವಾಗಿ ಅರಿವಳಿಕೆಗೆ ಒಳಪಡಿಸುವುದು ಇರಬಹುದು ಅಥವಾ ನರಸ್ತಂಭನದ (ನರ್ವ್ ಬ್ಲಾಕ್) ಮೂಲಕ ಒಂದು ಕೈಯನ್ನೋ ಕಾಲನ್ನೋ ಅರಿವಳಿಕೆಗೆ ಒಳಪಡಿಸುವುದು ಆಗಿರಬಹುದು. ಅಥವಾ ಬೆನ್ನುಹುರಿಯಲ್ಲಿ ಅರಿವಳಿಕೆ ಮದ್ದನ್ನು ಚುಚ್ಚುವ ಮೂಲಕ ಹೊಟ್ಟೆ ಮತ್ತು ಕೆಳಭಾಗವನ್ನು ಪೂರ್ತಿಯಾಗಿ ಅರಿವಳಿಕೆಗೆ ಈಡಾಗಿಸುವುದೂ ಇರಬಹುದು. ಈ ಬಗೆಗಿನ ಸಂಕಿರಣ ಮಾಹಿತಿಯನ್ನು ಇಲ್ಲಿ ತುಂಬ ಸರಳಗೊಳಿಸಿ ಹೇಳಿದ್ದೇನೆ.

ಶಸ್ತ್ರಚಿಕಿತ್ಸೆಯ ಆಚೆ ಅರಿವಳಿಕೆಯ ಪಾತ್ರ: ಹೌದು. ಈಗ ಅರಿವಳಿಕೆ ತಜ್ಞನ ಪಾತ್ರ ಕೇವಲ `ಆಪರೇಷನ್ನಿಗೆ ಅಮಲು’ ಕೊಡುವುದಷ್ಟಕ್ಕೇ ಸೀಮಿತವಾಗಿಲ್ಲ. ಉಸಿರಿನ ದಾರಿಯನ್ನು (Airway) ಸಮರ್ಪಕವಾಗಿ ನಿರ್ವಹಿಸುವ, ಉಸಿರಾಟವನ್ನು ನಿಯಂತ್ರಿಸುವ, ಅರಿವಳಿಕೆ ತಜ್ಞನ ನೈಪುಣ್ಯವನ್ನು ಹಲವು ದಶಕಗಳಿಂದ ತೀವ್ರ ಚಿಕಿತ್ಸಾ ಘಟಕದಲ್ಲಿ (ಐಸಿಯು) ಬಳಸಿಕೊಳ್ಳಲಾಗುತ್ತಿದೆ.

ತೀವ್ರ ಸ್ವರೂಪದ ತೊಂದರೆಗಳಿಂದಾಗಿ ಉಸಿರಿನ ಸಮಸ್ಯೆ ಇದ್ದವರಿಗೆ, ಕೃತಕ ಉಸಿರಾಟವನ್ನು ಏರ್ಪಡಿಸುವಲ್ಲಿ ಮತ್ತು ಆ ವಿಷಮ ಸಂದರ್ಭವನ್ನು ನಿರ್ವಹಿಸುವಲ್ಲಿ ಅರಿವಳಿಕೆ ತಜ್ಞರ ಪಾತ್ರ ಹಿರಿದು. ಇದರ ಜೊತೆಗೆ ಅರಿವಳಿಕೆಗೆ ಇನ್ನೂ ಕೆಲವು ಉಪಯೋಗಗಳಿವೆ. ಮಾರಣಾಂತಿಕ ಕಾಯಿಲೆಗಳಲ್ಲಿ – ಉದಾಹರಣೆಗೆ, ಕೆಲವು ಪ್ರಕಾರದ ಅರ್ಬುದ ರೋಗಗಳಲ್ಲಿ ನೋವನ್ನು ನಿರ್ವಹಿಸುವುದು ಸವಾಲಿನ ಸಂಗತಿ. ನೋವನ್ನು ನಿರ್ವಹಿಸುವ ತಮ್ಮ ಪರಿಣತಿಯಿಂದಾಗಿ ಹಲವು ಅರಿವಳಿಕೆ ತಜ್ಞರು ಈಗ ನೋವು ಶಾಮಕ ವೈದ್ಯಕೀಯವನ್ನು (pain medicine) ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಮೂರನೆಯದು – ವಿಶಿಷ್ಟ ಸಂದರ್ಭಗಳಲ್ಲಿ ಅರಿವಳಿಕೆಯನ್ನು ನೀಡುವಿಕೆ. ಮರ ಮುರಿದುಬಿದ್ದಾಗ ವ್ಯಕ್ತಿಯೊಬ್ಬ ಅದರ ಕೆಳಗೆ ಸಿಲುಕಿಕೊಂಡಿದ್ದಾನೆ ಅಥವಾ ಕಟ್ಟಡ ಕುಸಿದಾಗ ಅಲ್ಲಿ ಹಲವು ವ್ಯಕ್ತಿಗಳು ಸಿಲುಕಿದ್ದಾರೆ ಎಂದು ಭಾವಿಸಿಕೊಳ್ಳಿ. ಅವರಿಗೆ ನೋವಾಗದಂತೆ ಅಲ್ಲಿಂದ ಎತ್ತಿ ಹೊರಕ್ಕೆ ಸಾಗಿಸಲು ಕೂಡ ಅರಿವಳಿಕೆಯ ಬಳಕೆ ಬೇಕಾಗಬಹುದು.

ಈವರೆಗೆ ನಾವು ಅರಿವಳಿಕೆಯ, ಮಾನವ ಬಳಕೆಯನ್ನು ಮಾತ್ರ ಲಕ್ಷಿಸಿದೆವು. ಅದರ ಆಚೆಗೂ ಅರಿವಳಿಕೆಗೆ ಪಾತ್ರವಿದೆ. ಪ್ರಾಣಿಗಳಲ್ಲಿ ಕೂಡ ಈಗಾಗಲೇ ಅರಿವಳಿಕೆಯ ಬಳಕೆ ಪ್ರಚಲಿತದಲ್ಲಿದೆ. ಹುಲಿ, ಚಿರತೆಯಂಥ ಪ್ರಾಣಿಗಳು ಊರಿಗೆ ನುಗ್ಗಿದರೆ, ಅವುಗಳನ್ನು ಬಂಧಿಸಲು ಅರಿವಳಿಕೆಯ ಬಳಕೆ ಅಗತ್ಯವಾಗಬಹುದು. ಆನೆ ಮದವೇರಿ ಹತೋಟಿ ತಪ್ಪಿದರೆ ಅರಿವಳಿಕೆ ಬೇಕು. ಸಾಕುಪ್ರಾಣಿಗಳಲ್ಲಿ ಹಲವು ಶಸ್ತ್ರಚಿಕಿತ್ಸೆಗಳನ್ನು ಕೂಡ ಅರಿವಳಿಕೆಯನ್ನು ಬಳಸಿ ಮಾಡಲಾಗುತ್ತಿದೆ.

ನೋವು, ಕಾಯಿಲೆ, ಆಯಾಸದಿಂದ ಮುಕ್ತನಾಗಿ ಸುಂದರ, ಆರೋಗ್ಯಪೂರ್ಣ ಜೀವನವನ್ನು ನಡೆಸುವುದು ಪ್ರತಿಯೊಬ್ಬನ ಕನಸು. ಅಂಥದೊಂದು ಗುರಿಯತ್ತ, ಎಂದರೆ ನೋವು, ಆಯಾಸವನ್ನು ನಿಯಂತ್ರಿಸುವ, ಆ ಮೂಲಕ ರೋಗಿಯ ಮುಖದಲ್ಲಿ ನಗುವನ್ನು ಮೂಡಿಸುವ ಪ್ರಯತ್ನದಲ್ಲಿ ಸದಾ ನಿರತರಾಗಿರುವ ಅರಿವಳಿಕೆ ತಜ್ಞರು, ಸಂಕಟದ ವಿರುದ್ಧ ಹೋರಾಡುವ ಯೋಧರು. ವಿಶ್ವ ಅರಿವಳಿಕೆಯ ದಿನದಂದು ಅವರಿಗೆ, ನಮ್ಮ ಕೃತಜ್ಞತೆಗಳನ್ನು, ಶುಭಾಶಯಗಳನ್ನು ಹೇಳೋಣ.

ಅರಿವಳಿಕೆ: ಇವು ತಿಳಿದಿರಲಿ
~ ಅರಿವಳಿಕೆಯ ಪೂರ್ವದಲ್ಲಿ ತಜ್ಞರು ಪಡೆಯುವ ರೋಗಿಯ ಇತಿಹಾಸ ಮತ್ತು ಅವರು ನಡೆಸುವ ಪರೀಕ್ಷೆಗಳಿಗೆ ಪೂರ್ಣ ಸಹಕಾರ ನೀಡಿ.
~ ನಿಮಗೆ ಇರುವ ಕಾಯಿಲೆಗಳ ಬಗ್ಗೆ, ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರೆ ಆ ಬಗ್ಗೆ ಇತ್ಯಾದಿಗಳ ಕುರಿತು ಯಾವುದೇ ಮಾಹಿತಿಗಳನ್ನು ಮುಚ್ಚಿಡದೆ ಪೂರ್ತಿಯಾಗಿ ನೀಡಿ.
~ ಈ ಹಿಂದೆ ಶಸ್ತ್ರಕ್ರಿಯೆ ನಡೆದಿದ್ದರೆ ಮತ್ತು ಆ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮಗಳು, ಸಮಸ್ಯೆಗಳು ಆಗಿದ್ದರೆ ಆ ಬಗ್ಗೆಯೂ ಹೇಳಿ.
~ ಯಾವುದೇ ಔಷಧದಿಂದ ಅಡ್ಡ ಪರಿಣಾಮ ಉಂಟಾಗಿದ್ದರೆ, ಅಲರ್ಜಿ ಆಗಿದ್ದರೆ ಆ ಬಗ್ಗೆ ಹೇಳಿ.
~ ನಿಮ್ಮ ಶಸ್ತ್ರಕ್ರಿಯೆಗೆ ಯಾವ ಬಗೆಯ ಅರಿವಳಿಕೆ ಸೂಕ್ತ ಎಂಬುದನ್ನು ತಜ್ಞರೊಂದಿಗೆ ಚರ್ಚಿಸಿ ತಿಳಿದುಕೊಳ್ಳಿ.
~ ಕೆಲವೊಮ್ಮೆ ಬೇರೆಬೇರೆ ರೀತಿಗಳಿಂದ ನಿಮ್ಮ ಶಸ್ತ್ರಕ್ರಿಯೆಯನ್ನು ನಿರ್ವಹಿಸುವುದು ಸಾಧ್ಯವಿದೆ. ಆಗ ನಿಮ್ಮ ಆಯ್ಕೆಯನ್ನು ತಜ್ಞರಿಗೆ ತಿಳಿಸಬಹುದು.
~ ಅರಿವಳಿಕೆಯ ಪೂರ್ವದಲ್ಲಿ ನೀವು ಪಾಲಿಸಬೇಕಾದ ಸಂಗತಿಗಳನ್ನು, ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಜ್ಞರು ಹೇಳುತ್ತಾರೆ. ಅವನ್ನು ತಪ್ಪದೆ ಪಾಲಿಸಿ.
~ ಉಪವಾಸ ಇರುವ ಅವಧಿಯ ಬಗ್ಗೆ, ನೀವು ನಿಗದಿತವಾಗಿ ಸೇವಿಸುವ ಔಷಧಗಳನ್ನು ತೆಗೆದುಕೊಳ್ಳುವ ಅಥವಾ ತೆಗೆದುಕೊಳ್ಳದಿರುವ ಬಗ್ಗೆ ಅವರ ಸೂಚನೆಯನ್ನು ಪಾಲಿಸುವುದು ಬಹಳ ಮುಖ್ಯ.
~ ಶಸ್ತ್ರಕ್ರಿಯೆ ಮತ್ತು ಅರಿವಳಿಕೆ ನೀಡಲು ಅಗತ್ಯವಿರುವ ಅನುಮತಿ ಪತ್ರಕ್ಕೆ ಸಹಿ ಹಾಕಬೇಕು. ಆ ಸಮಯದಲ್ಲಿ, ನಿಮಗೆ ಅರ್ಥವಾಗುವ ಭಾಷೆಯಲ್ಲಿ ಅನುಮತಿ ಪತ್ರ ಇದೆಯೇ ನೋಡಿ. ಸರಿಯಾಗಿ ಓದಿ/ ಓದಿಸಿ, ತಿಳಿದು ಸಹಿ ಮಾಡಿ. ಅರಿವಳಿಕೆಯ ಸಂದರ್ಭದಲ್ಲಿ ಆಗಬಹುದಾದ `ಸಂಭವನೀಯ ಅಪಾಯಗಳು’, ತೊಂದರೆಗಳ ಬಗ್ಗೆ ಕೂಡ ತಜ್ಞರಲ್ಲಿ ಚರ್ಚಿಸಿ.
~ ಶಸ್ತ್ರಕ್ರಿಯೆಯ ನಂತರದ ಚೇತರಿಕೆಯ (ರಿಕವರಿ) ವೇಳೆಯಲ್ಲಿ ಕೂಡ ತಜ್ಞರ ಸಲಹೆಗಳನ್ನು ತಪ್ಪದೆ ಪಾಲಿಸಿ.

(ಲೇಖಕರು ಅರಿವಳಿಕೆ ತಜ್ಞರು, ಕವಿಗಳು)
sksourabha@gmail.com

Previous article“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ
Next articleRSS ನಿಷೇಧದ ಬೇಡಿಕೆ: ಪ್ರಿಯಾಂಕ್ ಖರ್ಗೆ ಪತ್ರ – ಯತ್ನಾಳ್ ಟಾಂಗ್

LEAVE A REPLY

Please enter your comment!
Please enter your name here