ಬದುಕಿನ ಕಹಿ ನುಂಗಿ ಸುಖಶಾಂತಿ ಸಮೃದ್ಧಿ ಹಬ್ಬ ಯುಗಾದಿ ಪ್ರಕೃತಿಯಲ್ಲಿ ಋತುಗಾಹಿ ವಸಂತನ ಆಗಮನ ಸಂಭ್ರಮ ಪಲ್ಲವಿಸುವ ಸಮಯ. ಹೊಸ ಚೈತನ್ಯದ ಚಿರ ಚೈತ್ರದ ಸ್ಫೂರ್ತಿ, ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥದಲ್ಲಿ ಈ ದಿನದ ವೈಶಿಷ್ಟ್ಯ ಉಲ್ಲೇಖವಿದೆ. ಶ್ರೀ ಶಕೆ 1948 ಪರಾಭವ ನಾಮ ಸಂವತ್ಸರ ಆರಂಭದ ದಿನ 19.03.2026 ಗುರುವಾರ.
ಹೊಸ ವರ್ಷ ಹರ್ಷದಾಯಕವಾಗಲೆಂಬ ಒಳ್ಳೆಯ ಇಚ್ಚೆಯಿಂದ ಆಚರಿಸುವ ಹಬ್ಬವೇ ಯುಗಾದಿ. ಯುಗ'' ಎಂದರೆನೂತನ ವರ್ಷ” `ಆದಿ’ ಎಂದರೆ ಆರಂಭ'' ಎಂದರ್ಥ. ಯುಗಾದಿ, ಹತ್ತು ಹಲವು ಪರಂಪರೆಯ ಆರಂಭದ ದಿನ. ವರ್ಷದ ಮೂರುವರೆ ಶುಭದಿನಗಳಲ್ಲಿ ಮೊದಲ ಮುಹೂರ್ತ ದಿನ.ಋತೂನಾಂ ಕುಸುಮಾಕರ:” ಎಂಬ ಗೀತಾಚಾರ್ಯನ ವಾಣಿಯಂತೆ ಋತುರಾಜ ವಸಂತದ ಶುಭಾಗಮನದ ದಿನ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತçವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, “ಆನಂದಮಯ ಈ ಜಗ ಹೃದಯ” ಎಂಬ ಕವಿ ವಾಣಿಯ ಸತ್ಯತೆ ಅರಿವಾಗುತ್ತದೆ. ಆ ಸಂತೋಷ ಸಂಭ್ರಮ ಕಂಡ ಜನ, ಎಣ್ಣೆ ನೀರು ಹಾಕಿಕೊಂಡು, ಹೊಸ ಬಟ್ಟೆ ಉಟ್ಟು, ನೂತನ ವರ್ಷವನ್ನು ಇದಿರುಗೊಳ್ಳುತ್ತಾರೆ.
ನವ ಸಂವತ್ಸರದ ಪ್ರಥಮದಿನ ಎಂಬ ಅರ್ಥದಲ್ಲಿ ಯುಗಾದಿ'' ಶಬ್ಧ ರೂಢಿಯಲ್ಲಿ ಇದೆ.ಯುಗ” ಎಂದರೆ ಕಾಲಗಣನೆ ಎಂಬಂತೆ ಅರ್ಥವಿದೆ. ಕ್ರಿ.ಪೂ. 2000 ಮೊದಲೇ ಮೆಸಪೊಟಾಮಿಯದಲ್ಲಿ ಹೊಸ ವರ್ಷ ಆಚರಿಸುವ ಪದ್ಧತಿ ಇತ್ತು. ಬ್ಯಾಬಿಲೋನಿಯಾದಲ್ಲಿ ಮೇಷ ಮಾಸದ ಅಮಾವಾಸ್ಯೆಯಂದು, ಅಸ್ಸರಿಬಿಯಾದಲ್ಲಿ ತುಲಾಮಾಸದ ಅಮಾವಾಸ್ಯೆಯಂದು, ಪರ್ಷಿಯನ್ನರು ಮತ್ತು ಈಜಿಪ್ತಿಯನ್ನರು ತುಲಾ ಸಂಕ್ರಾತಿಯಂದೆ. ಗ್ರೀಕರು ಮಕರ ಸಂಕ್ರಾತಿಯ ದಿನದಂದು ಹೊಸವರ್ಷವನ್ನು ಆಚರಿಸುತ್ತಿದ್ದರು. ಯುಗಾದಿ ಎಂದು? ಎಂದೊಡನೆಯೇ ಕ್ಷಣಾರ್ಧದಲ್ಲಿ ಕ್ಯಾಲೆಂಡರ್ ಪಂಚಾಂಗ ನೋಡಿ ಹೇಳಬಹುದು. ಆದರೆ ಇವುಗಳಲ್ಲಿ ನಮೂದಿಸಿರುವ ಎಣಿಕೆಗಳ ಹಿಂದೆ ಶತ-ಶತಮಾನಗಳ ಶ್ರಮ ಲೆಕ್ಕಾಚಾರ ತಿದ್ದುಪಡಿ ಅಡಗಿದ್ದು, ಅರ್ಥೈಸಲು ಸ್ವಾರಸ್ಯಕರವಾಗಿದೆ.
ಮಾನವನ ಪ್ರಪ್ರಥಮ ಪಂಚಾಂಗ ಆಕಾಶ. ಆಗಸದಲ್ಲಿಯ ಸೂರ್ಯ ಮತ್ತು ಚಲಿಸುವ ಗ್ರಹಗತಿಗಳನ್ನು ಅಭ್ಯಸಿಸಿದಾಗ ಮೊದಲ ಪಂಚಾಂಗ ಜನ್ಮ ತಾಳಿತು. ಚಂದ್ರಮಾನ ಹಾಗೂ ಸೌರಮಾನ ಪದ್ಧತಿಗಳು ನೈಸರ್ಗಿಕವಾದ ಮಳೆ, ಬೆಳೆ ಪ್ರವಾಹ ಸೂರ್ಯ-ಚಂದ್ರರ ಚಲನ ಗತಿಗಳು ಬೇರೆ ಇರುತ್ತಿದ್ದವು. ತಪ್ಪುಗಳನ್ನು ಹೇಗೆ ಸರಿಪಡಿಸುವದು ಎಂಬ ಜಿಜ್ಞಾಸೆ ಬಹಳಷ್ಟಾಯಿತು. ಆಗ ಜುಲಿಯಸ್ ಸೀಝರ ಲಕ್ಷವಹಿಸಿ ತನ್ನ ರಾಜಬಲ ಪ್ರಯೋಗದಿಂದ ಹೊಂದಿದ ತಪ್ಪುಗಳನ್ನು ಸರಿಪಡಿಸಿ ಕ್ಯಾಲೆಂಡರನ್ನು ಒಂದು ಹಂತಕ್ಕೆ ತಂದನು. ಯೋಗ್ಯ ತಜ್ಞರನ್ನು ನೇಮಿಸಿದನು. 365 ದಿನ 1\4 ದಿನಗಳ ಕಾಲಕ್ಕೆ ಒಂದು ವರ್ಷ ಎಂದು ಸಾರಿದನು. ಕಾಲುದಿನವನ್ನು ನಾಲ್ಕು ವರ್ಷಕೂಡಿಸಿ “ಲೀಪ ಈಯರ” ಮಾಡಿದ್ದು ಸಿಝರನ ಕಾಲದಲ್ಲಿ. ಈ ಜ್ಯುಲಿಯಸ್ ಸೀಝರನ ಕ್ಯಾಲೆಂಡರನಲ್ಲಿಯೂ ಆಚರಣೆಯಲ್ಲಿ ಕೆಲವು ಲೋಪದೋಷ ಉಂಟಾದವು. ಮುಂದೆ 1582 ರಲ್ಲಿ ಪೋಪ್ ಗೆರಗೋರಿಯವರು ಅದನ್ನು ಸರಿಪಡಿಸಿದರು.
ಅಂದಿನಿಂದ ವರುಷಾರಂಭ ಜನವರಿ ಒಂದರಿಂದ ಎಂದು ನಿರ್ಧರಿಸಲಾಯಿತು. ಇಂದು ವಿಶ್ವದಲ್ಲೆಲ್ಲಾ ವ್ಯವಹಾರಿಕವಾಗಿ ಎಲ್ಲರೂ ಗ್ರೆಗೂರಿಯನ್ ಕ್ಯಾಲೆಂಡರ ಪದ್ಧತಿಯನ್ನೇ ಉಪಯೋಗಿಸುವದು ಬಳಕೆಯಲ್ಲಿದೆ. ಈ ಪದ್ಧತಿಯನ್ನು ವ್ಯವಹಾರಿಕವಾಗಿ ಬಳಸಿದರೂ, ಹಲವಾರು ಸಂಸ್ಕೃತಿಗಳು ಶತಮಾನಗಳೂ ಹಬ್ಬಿ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಚಂದ್ರಮಾನ ರೀತಿಯಂತೆ ಆಚರಿಸುವುದನ್ನು ಬಿಡಲಿಲ್ಲ. ಚಂದ್ರನ ಆಕರ್ಷಣೆ ಎಷ್ಟು ಪ್ರಬಲವಾಗಿತ್ತೆಂದರೆ ಧಾರ್ಮಿಕ ಕಾರಣಗಳಿಗೆ `ಚಂದ್ರಮಾನ’ ಪಂಚಾಂಗವನ್ನೇ ಮುಂದುವರಿಸಿಕೊಂಡು ಬಂದರು.
ಚಂದ್ರಮಾನ ಯುಗಾದಿ ಮೇಷ ಸಂಕ್ರಮಣದ ಮೊದಲು ಬರುವ ಅಮಾವಾಸ್ಯೆಯ ಮರುದಿನ ಅಂದರೆ ಚೈತ್ರ ಶುಕ್ಲ ಪಾಡ್ಯದಂದು ಬರುತ್ತದೆ. ಇಂಗ್ಲೀಷ ಕ್ಯಾಲೆಂಡರ್ ಮಾರ್ಚ 14 ರಿಂದ ಏಪ್ರಿಲ್ 14ರ ಒಳಗೆ ಇರುತ್ತದೆ. ಸೌರಮಾನ ಯುಗಾದಿಯನ್ನು ನಿಶ್ಚಿತವಾಗಿ ಏಪ್ರಿಲ್ 14 ರಂದೇ ಆಚರಿಸುತ್ತಾರೆ. ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟö್ಯ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮ ರಾಜ್ಯವಾಳುವ ಪ್ರಾರಂಭಿಸಿದ. ಅಂದು ಶ್ರೀರಾಮನ ಜಯಕ್ಕೆ ಕಾರಣಕರ್ತರಾದ ಕಪಿ ಸೈನ್ಯ ವೀರರು ಹಾಗೂ ಅಯೋಧ್ಯೆಯ ಪ್ರಜೆಗಳೂ ನಲಿದಾಡಿದರು. ಶ್ರೀರಾಮನೊಂದಿಗೆ ಪ್ರಜೆಗಳೂ ತಮ್ಮ ತಮ್ಮ ಮನೆಯ ಮುಂದೆ ವಿಜಯ ಪತಾಕೆ ಹಾರಿಸಿದರು.
ಸೃಷ್ಟಿಯಾದ ದಿನ: ನಿರ್ಣಯ ಸಿಂಧುವಿನಲ್ಲಿ ಹೀಗೆ ಹೇಳಿದೆ: ||`ಚೈತ್ರೇಮಾಸಿ ಜಗದ್ಬ್ರಹ್ಮ ಸಸರ್ಜ ಪ್ರಥಮೇಹನಿ ಶುಕ್ಲಪಕ್ಷೇ ಸಮಗುಂತು, ತದಾ ಸುರ್ಯೋದಯೇ ಸತಿ|| ಅಂದರೆ ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯೆಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ. ಅಂದೇ ಗ್ರಹ,ನಕ್ಷತ್ರ, ಮಾಸ, ಋತು, ವರ್ಷ ವರ್ಷಾಧಿ ಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ. ರೋಮನ್ನರಿಗೆ ಜನವರಿಯ ಮೊದಲನೇ ದಿನವಿದ್ದಂತೆ, ಹಿಂದೂಗಳಿಗೆ “ಯುಗಾದಿ ಯುಗದ ಆ ದಿನ”. ಚಂದ್ರನಿಂದಲೇ ಸರಿ. (ಉದಾ: ತಿಂಗಳು ಬೆಳಕು ಎಂದರೆ ಚಂದ್ರನ ಬೆಳದಿಂಗಳು ಎಂದರ್ಥ). ಹುಣ್ಣೆಮೆಯ ದಿನ ಚಂದ್ರ ಯಾವ ನಕ್ಷತ್ರ ಯುಕ್ತನಾಗಿರುವನೋ ಆ ಹೆಸರಿನಿಂದಲೇ ಆಯಾ ತಿಂಗಳನ್ನು ಕರೆಯಲಾಗುತ್ತದೆ.
ಅಂದು ತಿಥಿ ಶ್ರವಣ ಮಾಡುವುದರಿಂದ ಸಂಪತ್ತು, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗನಾಶ, ಕರಣದಿಂದ ಚಿಂತಿಸಿದ ಕಾರ್ಯದಲ್ಲಿ ಸಿದ್ಧಿ ಹೀಗೆ ಶುಭಫಲ ಲಭಿಸುವುದು. ಈ ಪರಾಭವ ನಾಮ ಸಂವತ್ಸರವು ಸಕಲ ಜೀವ ಜಂತುಗಳಿಗೂ ಸುಖ-ಸಂಪತ್ತು ಆಯುಷ್ಯ. ಆರೋಗ್ಯ ಕೊಟ್ಟು ಹರಸಲಿ ಎಂದು ಹಾರೈಸಿ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.
– ಚಿದಂಬರಭಟ್ಟ. ರಾ. ಜೋಶಿ, ಧಾರವಾಡ,























