ಓದಿದ್ದು ಗಣಿತದಲ್ಲಿ ಎಂಎಸ್ಸಿ, ಮಾಡಿದ್ದು ಟೀಚರ್ ಕೆಲಸ, ಕಟ್ಟಿದ್ದು ಸಿರಿಧಾನ್ಯದ ಕೋಟೆ | ವಾರ್ಷಿಕ ವಹಿವಾಟು ಒಂದು ಕೋಟಿಗೂ ಹೆಚ್ಚು
ನಾನು ಓದ್ದಿದ್ದು ಎಂಎಸ್ಸಿ ಇನ್ ಮ್ಯಾಥಮೆಟಿಕ್ಸ್. ಕುವೆಂಪು ವಿಶ್ವವಿದ್ಯಾಲಯಕ್ಕೆ 6ನೇ ರ‍್ಯಾಂಕ್. ಅಂತಾರಾಷ್ಟ್ರೀಯ ಮಟ್ಟದ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿದ್ದೆ. ಕುಟುಂಬ ನಡೆಸುವಷ್ಟು ಸಂಬಳವೇನೋ ಇತ್ತು. ಆದರೆ ನಾನೊಬ್ಬಳೇ ಕೆಲಸ ಮಾಡಿದರೆ ಹೇಗೆ..? ಊರಿನಲ್ಲಿರುವ ಅದೆಷ್ಟೋ ಮಹಿಳೆಯರು ಸರಿಯಾಗಿ ಶಿಕ್ಷಣವನ್ನೂ ಪಡೆದಿಲ್ಲ.. ಅವರು ಹೇಗೆ ಕೆಲಸ ಮಾಡುತ್ತಾರೆ..?
ಆಗ ನನಗನಿಸಿದ್ದು ಎಲ್ಲರೂ ಕೆಲಸ ಮಾಡುವವರೇ ಆದರೆ ಕೆಲಸ ಕೊಡುವವರು ಯಾರು ಅಂತ. ಇವು ತನ್ನ ಹುಟ್ಟೂರಿನಲ್ಲೇ ಫ್ಯಾಕ್ಟರಿಯೊಂದನ್ನು ಆರಂಭಿಸಿ ಬರೋಬ್ಬರಿ 25ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಕೆಲಸ ಕೊಟ್ಟಿರುವ ಯಶಸ್ವಿ ಉದ್ಯಮಿ ಮಧುರಾ ಅವರ ಮಾತು.
ಶೃಂಗೇರಿಯಿಂದ ಬರೋಬ್ಬರಿ 25 ಕಿ.ಮೀ ದೂರವಿರುವ ಕಮ್ಮರಡಿ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಮಧುರಾ ಅವರು ಉದ್ಯಮಿಯಾಗಿ ಬದುಕು ಕಟ್ಟಿಕೊಂಡ ಬಗೆ ನಿಜಕ್ಕೂ ಸ್ಫೂರ್ತಿದಾಯಕವಾದದು. ಉನ್ನತ ಶಿಕ್ಷಣ ಪಡೆದು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಧುರಾ ಅವರಿಗೆ ಡಾ. ಎಪಿಜೆ ಅಬ್ದುಲ್ ಕಲಾ ಅವರ ಉದ್ಯಮ ಕುರಿತಾದ ಮಾತೊಂದು ಕಿವಿಗೆ ಬಿದ್ದಿತ್ತು.
ಸ್ವಂತ ಊರಿನಲ್ಲೇ ಏನಾನ್ನದರೂ ಮಾಡಬೇಕೆಂದು ನಿರ್ಧರಿಸಿದ ಅವರು ಬೆಂಗಳೂರು ತೊರೆದು ವಾಪಸ್ ಊರಿನೆಡೆಗೆ ಹೆಜ್ಜೆ ಹಾಕಿದರು. ಉದ್ಯಮಿಯಾಗುವ ಕನಸು ಕಂಡ ಮಧುರಾ ಅವರಿಗೆ ಬೆನ್ನೆಲುವಾಗಿ ನಿಂತಿದ್ದು ಅವರ ಪತಿ ಅನಿಲ್. ಆರಂಭದಲ್ಲಿ ಪತಿಯಿಂದ ತಕ್ಕಮಟ್ಟಿಗೆ ಆರ್ಥಿಕ ಸಹಾಯ ಪಡೆದರಾದರೂ ಸ್ವತಃ ತಾವೊಬ್ಬರೇ ನಿಂತು ಕಟ್ಟಿ ಬೆಳೆಸಿದ ಸಂಸ್ಥೆಯೇ `ಮಿಲ್ಲೆಕ್ಸ್’ ಎಂಬ ಸಿರಿಧಾನ್ಯಗಳಿಗೆ ಸಂಬಂಧಿಸಿದಂತೆ ತಯಾರಾಗುವ ಉತ್ಪನ್ನಗಳ ಫ್ಯಾಕ್ಟರಿ.
ಊರಲ್ಲೇ ಏನಾದರೂ ಮಾಡೋ ಆಸೆ: ಊರಿನಲ್ಲಿ ಉದ್ಯಮ ಆರಂಭಿಸಿದ ಮಧುರಾ ಅವರಿಗೆ ಸಾಕಷ್ಟು ಜನ ಬೆಂಗಳೂರಿನಲ್ಲಿ ಫ್ಯಾಕ್ಟರಿ ತೆರೆಯಿರಿ. ಆಗ ನಿಮಗೆ ಸರಕು ಸಾಗಣೆ ವೆಚ್ಚ ಉಳಿಯುತ್ತದೆ. ಸುಲಭವೂ ಆಗುತ್ತದೆ ಎಂದು ಸಲಹೆ ನೀಡಿದ್ದರಂತೆ. ಅದಕ್ಕೆ ಉತ್ತರವಾಗಿ ಮಧುರಾ ಅವರು ಹೇಳಿದ್ದೇನು ಗೊತ್ತೆ? ` ನೀವು ಹೇಳುವುದೇನೋ ಸರಿ. ಆದರೆ ನನ್ನೂರಿನಲ್ಲಿ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರಿದ್ದಾರೆ, ಇರುವ ಅಡಿಕೆ ಬೆಳೆಗೆ ಬೆಲೆಯಿಲ್ಲದೆ ಸಾಕಷ್ಟು ಜನ ಪರದಾಡುವಂಥ ಸ್ಥಿತಿಯಲ್ಲಿದ್ದಾರೆ.
ಅದರಲ್ಲೂ ಎಷ್ಟೋ ಮಹಿಳೆಯರು ಊರಲ್ಲಿ ಈ ಹಿಂದೆ ಇದ್ದೊಂದು ಫ್ಯಾಕ್ಟರಿ ಮುಚ್ಚಿದ ಮೇಲೆ ಕೆಲಸ ಇಲ್ಲದವರಾಗಿದ್ದಾರೆ. ಹೀಗಾಗಿ ನನ್ನೂರಿನಲ್ಲೇ ಫ್ಯಾಕ್ಟರಿ ತೆರೆಯಲು ನಿರ್ಧರಿಸಿದೆ. ಮೇಲಾಗಿ ನಾವು ತಯಾರಿಸುವ ಉತ್ಪನ್ನಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಊರಿನಲ್ಲಿಯೇ ಖರೀದಿಸುತ್ತೇನೆ. ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿ ಮಾಡುವದರಿಂದ ಅವರಿಗೂ ಅನುಕೂಲವಾಗುತ್ತದೆ. ನನ್ನೂರಿನ ಆರ್ಥಿಕತೆ ಬೆಳೆಯುತ್ತದೆ.’
ಸಣ್ಣ ರೂಂನಿಂದ-ಫ್ಯಾಕ್ಟರಿವರೆಗೆ: `ಹೇಗೆ ಜಾಗಿಂಗ್, ಜಿಮ್ ನಮ್ಮ ಸಂಸ್ಕೃತಿ ಅಲ್ಲವೋ ಹಾಗೆಯೇ ಪಿಜ್ಜಾ, ಬರ್ಗರ್ ಸಹ ನಮ್ಮ ಆಹಾರ ಪದ್ಧತಿಯಲ್ಲ. ಇಂದು ಜಿಮ್ ಸಂಸ್ಕೃತಿ ಕ್ರಮೇಣ ಮತ್ತೆ ಕಡಿಮೆಯಾಗುತ್ತ ಎಲ್ಲರೂ ನಿಧಾನವಾಗಿ ಭಾರತೀಯ ವ್ಯಾಯಾಮ ಪದ್ಧತಿ ಕಡೆ ತಿರುಗುತ್ತಿದ್ದಾರೆ. ಅದೇ ರೀತಿ ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಪಿಜ್ಜಾ ಬರ್ಗರ್ ಬಿಟ್ಟು ನಮ್ಮದೇ ಆಹಾರ ಪದ್ಧತಿಯಾದ ಸಿರಿಧಾನ್ಯಗಳ ಕಡೆ ಹೊರಳಬೇಕಿದೆ.
ಇದೇ ನಮ್ಮ ಆರೋಗ್ಯ ಕಾಪಿಡುವುದು’ ಎಂದು ಹೇಳುವ ಮಧುರಾ ಅವರು ಮೊದಲು ತಮ್ಮ ಫ್ಯಾಕ್ಟರಿಯನ್ನು ಆರಂಭಿಸಿದ್ದು ಸಣ್ಣ ರೂಂವೊಂದರಲ್ಲಿ. ಪತಿ ಸಾಫ್ಟವೇರ್ ಎಂಜಿನಿಯರ್. ಕೆಲಸಕ್ಕೆಂದು ಬೆಂಗಳೂರಿನಲ್ಲಿ ಇರ್ತಾರೆ. ಹೀಗಾದ್ದಾಗ್ಯೂ ಹಠಕ್ಕೆ ಬಿದ್ದವರಂತೆ ಮಧುರಾ ತಾವೊಬ್ಬರೇ ಖುದ್ದು ಪ್ರತಿದಿನವೂ ಮಾರುಕಟ್ಟೆಗೆ ತೆರಳಿ ಉತ್ಪನ್ನ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ ತಂದು ಅದೇ ರೂಂನಲ್ಲಿ ಒಂದೇ ಒಂದು ಸೆಕೆಂಡ್ ಹ್ಯಾಂಡ್ ಯಂತ್ರವನ್ನಿಟ್ಟುಕೊಂಡು ತಾವೇ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಹಾಗೆ ತಯಾರಾದ ಮೊದಲ ಉತ್ಪನ್ನವೇ ಮಥರ್ ರೂಟ್ ಎಂಬುವ ಆರು ವರ್ಷದಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ಕೊಡುವ ಆಹಾರ. ತಾವೇ ರೂಪಿಸಿದ ಉತ್ಪನ್ನಗಳನ್ನು ಪ್ಯಾಕ್ ಮಾಡಿ ಮೊದಮೊದಲು ಎಷ್ಟೋ ಜನಕ್ಕೆ ಉಚಿತವಾಗಿ ವಿತರಿಸಿದರು. ಒಂದೇ ಉತ್ಪನ್ನದಿಂದ ಆರಂಭವಾದ ಉದ್ಯಮವೀಗ ನಾಲ್ಕಾರು ಉತ್ಪನ್ನಗಳಿಗೆ ವಿಸ್ತರಿಸಿದೆ. ಮಿಲೆಟ್ ಹೆಲ್ತ್ ಮಿಕ್ಸ್, ಮಿಲೆಟ್ ಹೆಲ್ತ್ ಮಿಕ್ಸ್ ಚೂರ್ಣ, ಮಿಲ್ಲೆಕ್ಸ್ ಸೂಪ್, ಹೀಗೆ ಅವರ ಉತ್ಪನ್ನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಣ್ಣ ರೂಂನಲ್ಲಿ ಆರಂಭವಾದ ಉದ್ಯಮ ಕೇವಲ ಐದೇ ವರ್ಷದಲ್ಲಿ ಇಂದು ಬೃಹದಾಕಾರ ಫ್ಯಾಕ್ಟರಿಯಾಗಿ ಬೆಳೆದು ನಿಂತಿದೆ.
ವಿದೇಶದಿಂದಲೂ ಆರ್ಡರ್ : ಅಂದುಕೊಂಡಂತೆ ಇಂದು ಮಧುರಾ ಅವರು 25ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾರೆ. ಯಾವುದೇ ಮಾರ್ಕೆಟಿಂಗ್ ಇಲ್ಲದೆ ಜನರಿಂದಲೇ ಪ್ರಚಾರ ಗಿಟ್ಟಿಸಿಕೊಂಡ ಅವರ ಉತ್ಪನ್ನಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಪ್ರತಿದಿನವೂ ನೂರಾರು ಆರ್ಡರ್‌ಗಳನ್ನು ಸ್ವೀಕರಿಸುತ್ತಾರೆ.
ವೆಬ್‌ಸೈಟ್ ಮೂಲಕ ಆರ್ಡರ್: ಅದರಲ್ಲೂ ವಿಶೇಷವೆಂದರೆ ಅನೇಕರು ವಿದೇಶಗಳಿಂದಲೂ ವೆಬ್‌ಸೈಟ್ ಮೂಲಕವಾಗಿ ಆರ್ಡರ್ ಮಾಡುತ್ತಾರೆ. ಇದಕ್ಕೆಂದೇ ಮಧುರಾ ಅವರು ವೆಬ್‌ಸೈಟ್‌ವೊಂದನ್ನು ರಚಿಸಿದ್ದಾರೆ. ಅಷ್ಟರಮಟ್ಟಿಗೆ ಮಧುರಾ ಅವರು ಸ್ವಂತ ಪರಿಶ್ರಮದಿಂದ ಕಟ್ಟಿದ ಸಂಸ್ಥೆ ಇಂದು ಯಶಸ್ಸು ಕಂಡಿದೆ. ಆರೋಗ್ಯ ದೃಷ್ಟಿಯಿಂದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮಧುರಾ ಅವರ ಉದ್ಯಮದ ವಾರ್ಷಿಕ ವಹಿವಾಟು ಈಗ 1 ಕೋಟಿ ರೂ. ದಾಟುತ್ತದೆ. ಆರಂಭದಲ್ಲಿ ಸಾವಿರಾರು ರೂಪಾಯಿ ಮಾರಾಟವಿದ್ದ ಈ ಉದ್ಯಮದ ಕೋರಿಯರ್ ವೆಚ್ಚವೇ ಈಗ ಲಕ್ಷಾಂತರ ರೂಪಾಯಿ ಆಗುತ್ತದೆ ಎನ್ನುತ್ತಾರೆ ಮಧುರಾ.


























