ವಾಟ್ಸಾಪ್ ಹೈಜಾಕ್ ಮಾಡುವ ಹೊಸ ದಂಧೆ `ಘೋಸ್ಟ್‌ಪೇರಿಂಗ್’ | ಡಿವೈಸ್ ಲಿಂಕ್ ಮಾಡಿ ಮೋಸ
ನಾನಾ ರೀತಿಯ ಸೈಬರ್ ವಂಚನೆಗಳ ಸಾಲಿಗೆ ಇದೀಗ ಹೊಸತೊಂದು ದಂಧೆ ಸೇರ್ಪಡೆಯಾಗಿದೆ. ಅದು ಘೋಸ್ಟ್ ಪೇರಿಂಗ್. ಇಲ್ಲಿ ನಿಮ್ಮ ಬಳಿ ಒಟಿಪಿ ಕೇಳದೆಯೇ, ಸ್ವಿಮ್ ಸ್ವಾಪ್ ಮಾಡದೆಯೇ, ವೆರಿಫಿಕೇಶನ್ ಕೋಡ್ ಕಳುಹಿ ಸದೆಯೇ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡದೆಯೇ ವಂಚನೆ ಮಾಡಲಾಗುತ್ತದೆ. ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್‌ಗೆ ತಮ್ಮ ಮೊಬೈಲ್ ಪೇರ್ ಮಾಡಿಕೊಂಡು, ನಿಮ್ಮ ಮೊಬೈಲನ್ನು ಸಂಪೂರ್ಣ ಹೈಜಾಕ್ ಮಾಡುವ ದಂಧೆಯಿದು. ನಿಮಗೆ ಗೊತ್ತಾಗುವವರೆಗೂ ಅವರು ನಿಮ್ಮ ಮೊಬೈಲನ್ನು ತಮ್ಮ ಮೊಬೈಲಿನಂತೆಯೇ ಬಳಸಬಲ್ಲರು!
ಏನಿದು ಘೋಸ್ಟ್ ಪೇರಿಂಗ್?: ನಮಗೆ ಗೊತ್ತಿಲ್ಲದೆಯೇ ನಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್ ಅನ್ನು ಇನ್ನೊಬ್ಬರು ತಮ್ಮ ಮೊಬೈಲ್‌ಗೆ ಪೇರಿಂಗ್ ಮಾಡಿಕೊಂಡು ಬಳಸುವುದೇ ಘೋಸ್ಟ್ ಪೇರಿಂಗ್. ಇದರಲ್ಲಿ ಕೇವಲ ವಾಟ್ಸಾಪ್ ಮಾತ್ರ ಹೈಜಾಕ್ ಆಗುವುದಿಲ್ಲ. ಅದ ರಲ್ಲಿನ ಮಾಹಿತಿಯನ್ನು ಆಧರಿಸಿ ಕ್ರಮೇಣ ಇಡೀ ಫೋನನ್ನು ಹೈಜಾಕರ್‌ಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ‘ನರೇಗಾ’ಗೆ ಪರ್ಯಾಯ VB—G RAM G ಕಾಯ್ದೆಗೆ ರಾಷ್ಟ್ರಪತಿ ಅಂಕಿತ
ಒಟಿಪಿ, ಪಾಸ್‌ವರ್ಡ್ ಬೇಕಿಲ್ಲ: ಈ ರೀತಿ ಮೊಬೈಲನ್ನು ಹ್ಯಾಕ್ ಮಾಡಲು ದಂಧೆಕೋರರು ಒಟಿಪಿ ಅಥವಾ ಪಾಸ್‌ವರ್ಡ್ಗಳನ್ನು ಬಳಸುವುದಿಲ್ಲ. ಸಾಂಪ್ರದಾಯಿಕ ಹ್ಯಾಕಿಂಗ್ ವಿಧಾನಗಳನ್ನು ಬಿಟ್ಟು, ಮೊಬೈಲ್ ಬಳಕೆದಾರರು ಹ್ಯಾಕಿಂಗ್‌ಗೆ ಸ್ವತಃ ತಾವೇ ಒಳಗಾಗುವಂತೆ ಮಾಡುವ ತಂತ್ರವಿದು. ಹೀಗೆ ಹ್ಯಾಕ್ ಆದವರಿಗೆ ತಾವು ಹ್ಯಾಕ್ ಆಗಿದ್ದೇವೆ ಎಂಬುದೇ ತಿಳಿಯುವುದಿಲ್ಲ. ಏಕೆಂದರೆ ವಿಶ್ವಾಸಾರ್ಹ ವ್ಯಕ್ತಿಗಳ ಸಂದೇಶದ ಮೂಲಕವೇ ಇವರು ಹ್ಯಾಕ್ ಆಗಿರುತ್ತಾರೆ. ಅಷ್ಟು ನಾಜೂಕಾಗಿ ಈ ಘೋಸ್ಟ್‌ಪೇರಿಂಗ್ ವಿಧಾನವನ್ನು ಹೆಣೆಯಲಾಗಿದೆ.
ನಂಬಿಕಸ್ಥರಿಂದಲೇ ಹರಡುವ ಸ್ಕ್ಯಾಮ್: ನಿಮ್ಮ ಮೊಬೈಲ್‌ನ ನಿಯಂತ್ರಣ ದಂಧೆಕೋರರಿಗೆ ಸಿಕ್ಕರೆ ನಿಮ್ಮ ವಾಟ್ಸಾಪ್ ಲಿಸ್ಟ್‌ನಲ್ಲಿರುವ ಎಲ್ಲರಿಗೂ ಅವರು ಸಂದೇಶ ಕಳುಹಿಸಬಹುದು. ಅವರಲ್ಲಿ ಯಾರಾದರೂ ಹ್ಯಾಕಿಂಗ್‌ಗೆ ಒಳಗಾದರೆ ಅವರ ಸ್ನೇಹಿತರಿಗೆಲ್ಲ ಹ್ಯಾಕರ್‌ಗಳು ಸಂದೇಶ ಕಳುಹಿಸಬಹುದು. ಹೀಗಾಗಿ ನಂಬಿಕಸ್ಥರ ಮೂಲಕವೇ ಒಬ್ಬರಿಂದ ಒಬ್ಬರಿಗೆ ಶರವೇಗದಲ್ಲಿ ಈ ದಂಧೆ ಹರಡುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್
ಪಾರಾಗುವುದು ಹೇಗೆ?: ಆಗಾಗ ವಾಟ್ಸಾಪ್‌ನಲ್ಲಿ ಲಿಂಕ್ಡ್ ಡಿವೈಸ್ ಚೆಕ್ ಮಾಡುತ್ತಿರಿ. ಗೊತ್ತಿಲ್ಲದ ಸಂಪರ್ಕದ ಜೊತೆ ಲಿಂಕ್ ಆಗಿದ್ದರೆ ಅದನ್ನು ತಕ್ಷಣ ತೆಗೆದುಹಾಕಿ ಕೊಂಚ ಅನುಮಾನವಿದ್ದರೂ ಪೇರಿಂಗ್ ಕೋಡ್‌ಗಳನ್ನು ಯಾವುದೇ ಕಾರಣಕ್ಕೆ ನಮೂದಿಸಬೇಡಿ. 2-ಸ್ಟೆಪ್ ವೆರಿಫಿಕೇಶನ್ ವಿಧಾನವನ್ನು ತಪ್ಪದೇ ಅಳವಡಿಸಿಕೊಳ್ಳಿ ಪರಿಚಯಸ್ಥರಿಂದ ಬಂದ ಸಂದೇಶ ಅನಿರೀಕ್ಷಿತವಾಗಿದ್ದರೆ ಇನ್ನೊಮ್ಮೆ ಖಚಿತಪಡಿಸಿಕೊಳ್ಳುವುದು ಉತ್ತಮ
ನೀವು ಹೇಗೆ ಹ್ಯಾಕ್ ಆಗುತ್ತೀರಿ?: ಮೊದಲಿಗೆ ನಿಮ್ಮ ಪರಿಚಯದವರೊಬ್ಬರ ಮೊಬೈಲ್ ನಿಂದಲೇ ನಿಮಗೆ ವಾಟ್ಸಾಪ್ ಸಂದೇಶ ಬರುತ್ತದೆ. ಹಾಯ್, ನಿನ್ನದೊಂದು ಫೋಟೋ ನೋಡಿದೆ' ಎಂಬಂತಹ ಮಾಮೂಲಿ ಸಂದೇಶ ಅದಾಗಿರುತ್ತದೆ ಅದರ ಜೊತೆಗೇ ಒಂದು ಲಿಂಕ್ ಇರುತ್ತದೆ. ಆದರೆ ಅದು ಲಿಂಕ್ ರೀತಿ ಕಾಣಿಸುವುದಿಲ್ಲ. ಬದಲಿಗೆ ವಾಟ್ಸಾಪ್‌ನೊಳಗಿನ ಫೇಸ್ ಬುಕ್‌ನ ಪ್ರಿವ್ಯೂ ರೀತಿ ಇರುತ್ತದೆ. ಹೇಗಿದ್ದರೂ ಇದು ಪರಿಚಯಸ್ಥರ ಮೆಸೇಜ್ ಎಂದು ನೀವು ಫೋಟೋ ನೋಡಲು ಲಿಂಕ್ ಒತ್ತುತ್ತೀರಿ ಆಗ ಫೇಸ್‌ಬುಕ್ ರೀತಿ ಕಾಣಿಸುವ ಫೇಕ್ ವೆಬ್‌ಪೇಜ್ ತೆರೆದುಕೊಳ್ಳುತ್ತೆ. ಅಲ್ಲಿವೆರಿಫೈ’ ಮಾಡಿರಿ ಸಂದೇಶ ಬರುತ್ತದೆ,
ಇದನ್ನೂ ಓದಿ: ಪಾಕ್‌ಗೆ ರಹಸ್ಯ ಮಾಹಿತಿ ಲೀಕ್ ಮತ್ತೊಬ್ಬ ಆರೋಪಿಯ ಬಂಧನ
ವೆರಿಫೈ ಮಾಡಲು ನಿಮ್ಮ ಫೋನ್ ನಂಬರ್ ಕೇಳಲಾಗುತ್ತದೆ. ಅದನ್ನು ಹಾಕಿದಾಗ ವಾಟ್ಸಾಪ್‌ನಲ್ಲಿ ಪೇರಿಂಗ್ ಕೋಡ್ ಜನರೇಟ್ ಆಗುತ್ತದೆ. ನಂತರ ಫೇಕ್ ಪೇಜ್‌ನವರು ನಿಮಗೆ ಈ ಕೋಡ್ ಅನ್ನು ವಾಟ್ಸಾಪ್‌ನಲ್ಲಿ ನಮೂದಿಸುವಂತೆ ಕೋರುತ್ತಾರೆ
ನೀವು ಕೋಡ್ ಹಾಕಿದಾಗ ಹ್ಯಾಕರ್ ಬಳಿ ಇರುವ ಡಿವೈಸ್‌ಗೆ ನಿಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್ ಬಳಸಲು ಅನುಮತಿ ಸಿಗುತ್ತದೆ. ಆಗ ನಿಮ್ಮ ಮೊಬೈಲಿನಲ್ಲಿರುವ ಸಂದೇಶ ಓದಲು, ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು, ನಿಮ್ಮ ಹೆಸರಲ್ಲಿ ಬೇರೆಯವರಿಗೆ ಸಂದೇಶ ಕಳಿಸಲು ಹ್ಯಾಕರ್‌ಗೆ ಸಾಧ್ಯವಾಗುತ್ತದೆ.
ಇಷ್ಟೆಲ್ಲ ಆದರೂ ನಿಮ್ಮ ಮೊಬೈಲಿನಲ್ಲಿ ವಾಟ್ಸಾಪ್ ಎಂದಿನಂತೆ ಕೆಲಸ ಮಾಡುತ್ತಲೇ ಇರುತ್ತದೆ. ಹೀಗಾಗಿ ನಿಮಗೆ ಅನುಮಾನ ಬರುವುದಿಲ್ಲ. ಕ್ರಮೇಣ ನಿಮ್ಮ ಮೊಬೈಲಿನ ಸಂಪೂರ್ಣ ನಿಯಂತ್ರಣ ಸಿಕ್ಕಾಗ ಹ್ಯಾಕರ್‌ಗಳು ಅಲ್ಲಿನ ವಿವರವನ್ನೇ ಬಳಸಿ ಹಣವನ್ನೂ ಲಪಟಾಯಿಸಬಹುದು. ಜೆನ್ ಡಿಜಿಟಲ್ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆ ಘೋಸ್ಟ್‌ಪೇರಿಂಗ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.























