ರಾಗಿ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳಿಂದ ತೆಗೆದ ಹಾಲಿನಿಂದ ಐಸ್‌ಕ್ರೀಂ ತಯಾರಿಸಿದ ರಾಯಕರ್
ಬೆಂಗಳೂರಿನ ಮಲ್ಲೇಶ್ವರದ ಲಿಕಿ ಫುಡ್ಸ್ ಸ್ಥಾಪನೆ ಹಿಂದೆ ಒಂದು ಕತೆ ಇದೆ. ಇದನ್ನು ಶುರು ಮಾಡಿದ ಗೌತಮ್ ರಾಯಕರ್ ಮೂಲತಃ ಇಂಜಿನಿಯರಿಂಗ್ ವಿದ್ಯಾರ್ಥಿ. ಆದರೆ ಅದಕ್ಕಿಂತಲೂ ಬೇರೆ ಏನಾದರೂ ಮಾಡಬೇಕು ಎನ್ನುವ ತವಕ. ತಂತ್ರಜ್ಞಾನ ಕೈಗಾರಿಕೆಯಲ್ಲಿ ಉದ್ಯೋಗ ಹಿಡಿಯುವ ಆಸಕ್ತಿ ಇರಲಿಲ್ಲ. ಹೀಗಾಗಿ ಇಂಜಿನಿಯರಿಂಗ್ ಮುಗಿಸದೆ, ಮನೆತನದ ಉದ್ಯೋಗವಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ವಿತರಣೆಯಲ್ಲಿ ತೊಡಗಿಕೊಂಡರು.
ಅಲ್ಲೂ ಮುಂದುವರಿಯುವ ಆಸಕ್ತಿ ಇರಲಿಲ್ಲ. ಯಾವುದಾದರೂ ಉದ್ದಿಮೆ ಕಟ್ಟಬೇಕೆಂದು ಮನಸ್ಸಿನಲ್ಲಿ ಹಂಬಲ ಇತ್ತು. ಸಿರಿಧಾನ್ಯಗಳಲ್ಲಿ ಭರಪೂರ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮುಂತಾದ ಖನಿಜಗಳಿರುತ್ತವೆ. ಸಿರಿಧಾನ್ಯಗಳ ಮೂಲಕ ಇದನ್ನು ಜನರಿಗೆ ಒದಗಿಸುವ ಆಲೋಚನೆ ಬಂದಿತು. ಆದರೆ ಮಕ್ಕಳು ಸಾಮಾನ್ಯವಾಗಿ ಸಿರಿಧಾನ್ಯಗಳನ್ನು ಇಷ್ಟಪಡುವುದಿಲ್ಲ.
ಮಾರುಕಟ್ಟೆಯಲ್ಲಿ ಈಗಾಗಲೇ ಚಕ್ಕಲಿ, ಕೋಡುಬಳೆ ಮುಂತಾದ ಸಿರಿಧಾನ್ಯಗಳ ಪದಾರ್ಥಗಳಿವೆ. ಸಿರಿಧಾನ್ಯಗಳ ಮೂಲಕ ಐಸ್ ಕ್ರೀಂ ತಯಾರಿಸಿದಲ್ಲಿ, ಅದು ಮಕ್ಕಳಿಗೂ ಇಷ್ಟವಾಗುತ್ತದೆ, ದೊಡ್ಡವರೂ ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಇಂಥದ್ದಕ್ಕೆ ಬೇಡಿಕೆ ಇದೆ ಎನ್ನುವುದು ಗಮನಕ್ಕೆ ಬಂದಿತು. ಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಮುಂದಾದರು.
ಯಾವುದೇ ಪ್ರಾಣಿಯ ಹಾಲು ಅಥವಾ ಹಾಲಿನ ಪದಾರ್ಥ ಬಳಕೆ ಮಾಡದೆ ಐಸ್‌ಕ್ರೀಂ ತಯಾರಿಸಿದಲ್ಲಿ ಕೊಬ್ಬುರಹಿತವಾಗಿ ಮಕ್ಕಳಿಗೆ ಇಷ್ಟವಾದ ಐಸ್‌ಕ್ರೀಂ ಕೊಡಬಹುದು ಎನ್ನಿಸಿತು. ಆ ಪದಾರ್ಥ ಮಾರುಕಟ್ಟೆಯಲ್ಲಿ ಇಲ್ಲ ಎನ್ನುವುದು ಗಮನಕ್ಕೆ ಬಂದಿತು. ಈ ವೃತ್ತಿಯಲ್ಲಿ ಭವಿಷ್ಯವೂ ಇದೆ ಎನ್ನುವುದನ್ನು ಕಂಡುಕೊಂಡರು. ಆದರೆ ಅದನ್ನು ಹೇಗೆ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ.
ಹೀಗಾಗಿ ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಕಾರ ಪಡೆದುಕೊಂಡು ರಾಗಿ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳಿಂದ ಹಾಲು ತೆಗೆದು, ಅದರಿಂದ ಐಸ್‌ಕ್ರೀಂ ಮಾಡುವುದನ್ನು ಕಲಿತುಕೊಂಡರು. ರಾಯಚೂರು ಇನ್‌ಸ್ಟಿಟ್ಯೂಟ್‌ನಲ್ಲೂ ತರಬೇತಿ ಪಡೆದುಕೊಂಡರು. ಆ ತರಬೇತಿ ಪಡೆದುಕೊಂಡ ಮಾತ್ರಕ್ಕೆ ಕೈಗಾರಿಕೆ ಮಾಡಲು ಸಾಧ್ಯವಾಗೋದಿಲ್ಲ.
ಹೆಚ್ಚುವರಿ ಸಂಶೋಧನೆ ಮಾಡಬೇಕಾಗುತ್ತದೆ. ಎಷ್ಟೋ ಸಲ ಮಾಡಿದ ಪದಾರ್ಥ ತಿನ್ನೋದಕ್ಕೂ ಆಗದೇ, ಹಸುಗಳಿಗೆ ಸುರಿದು ಬಂದಿದ್ದಿದೆ. ಕೆಲವೊಮ್ಮೆ ಹಸುಗಳೂ ಕೂಡ ತಿನ್ನಲು ಆಗ್ತಿಲ್ಲ ಎಂದು ಗೋಣು ಅಲ್ಲಾಡಿಸಿವೆ ಎಂದು ಗೌತಮ್ ನಗುತ್ತಾರೆ. 2000ನೇ ಇಸವಿಯಲ್ಲಿ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದಲ್ಲಿ ಈ ಪದಾರ್ಥಗಳಿಗೆ ಭಾರಿ ಡಿಮ್ಯಾಂಡ್ ಇರೋದು ಖಚಿತ ಆಗಿದೆ.
ತಮ್ಮ ಪದಾರ್ಥಗಳು ಮಕ್ಕಳಿಗೆ ಇಷ್ಟ ಆಗುತ್ತೋ ಇಲ್ಲವೋ ತಿಳಿದುಕೊಳ್ಳಲು ಶಾಲೆ ಬಳಿಯೇ ಹೋಗಿ ಅದನ್ನು ಫ್ರಿಯಾಗಿ ನೀಡಿ, ಪೊಲೀಸರಿಂದ ವಿಚಾರಣೆಯ ಕಿರಿಕಿರಿ ಎದುರಿಸಬೇಕಾಗಿ ಬಂದಿತ್ತು ಎನ್ನುವುದು ಗೌತಮ್ ಅವರ ಇನ್ನೊಂದು ಅನುಭವ. ನಾಲೈದು ವರ್ಷಗಳ ಸಂಶೋಧನೆ, ಅಭಿವೃದ್ಧಿ ನಂತರ ಇದೀಗ ಲಿಕಿ ಫುಡ್ಸ್ ಒಂದು ಹಂತಕ್ಕೆ ಬಂದು ತಲುಪಿದೆ.
ಸಿರಿಧಾನ್ಯಗಳ ಕಾಫಿ, ಸ್ಮೂತಿ, ಕೇಕ್, ಪಿಜ್ಜಾ, ಪಾಸ್ತಾ, ಬ್ರೆಡ್ ಮುಂತಾದವನ್ನು ಈಗ ತಯಾರಿಸಲಾಗುತ್ತಿದೆ. ಚೇಪೇ ಹಣ್ಣಿನ ಫ್ಲೇವರ್ ಇರುವ ಐಸ್‌ಕ್ರೀಂಗೆ ಭಾರಿ ಡಿಮ್ಯಾಂಡ್ ಇದೆಯಂತೆ. ಲಿಕಿ ಫುಡ್ಸ್ ಮೊದಲು ಪ್ರೊಪ್ರೈಟರ್‌ಶಿಪ್‌ನಲ್ಲಿ ಆರಂಭವಾದ ಕಂಪನಿ. ಆದರೆ ಅಂಥ ಕಂಪನಿಗಳಿಗೆ ಕಾರ್ಪೊರೇಟ್ ವಲಯದಲ್ಲಿ ಪ್ರವೇಶವೇ ಇಲ್ಲ ಎಂದು ಗೊತ್ತಾದ ಮೇಲೆ, ಕಳೆದ ವರ್ಷ ಲಿಕಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಪರಿವರ್ತನೆಗೊಂಡಿದೆ.
ಈಗ ಟೈಟಾನ್, ಟಾಟಾ, ಕಂಪ್ಯೂಟರ್ ಸೆಂಟರ್, ಈಗಲ್ ಮುಂತಾದ ಕಂಪನಿಗಳಲ್ಲಿ ಲಿಕಿಫುಡ್ ಔಟ್‌ಲೆಟ್‌ಗಳನ್ನು ಶುರು ಮಾಡಲು ಅವಕಾಶ ಸಿಕ್ಕಿದೆ. ಫ್ರಾಂಚೈಸಿ ಓಪನ್ ಮಾಡಲು ಆಸಕ್ತಿ ತೋರಿಸಿ 500ಕ್ಕೂ ಹೆಚ್ಚು ಜನ ಫೋನ್ ಮಾಡಿದ್ದಾರೆ! ದುಬೈ, ಸಿಂಗಾಪೂರ್ ನಿಂದಲೂ ನಮಗೂ ಈ ಪದಾರ್ಥ ಕಳುಹಿಸಿ ಅಂತ ಕರೆ ಮಾಡಿದ್ದಾರೆ. ನಿಧಾನವಾದ್ರೂ ಪರವಾಗಿಲ್ಲ, ಗಟ್ಟಿ ಹೆಜ್ಜೆಯನ್ನಿಟ್ಟುಕೊಂಡೇ ಹೋಗಬೇಕು ಎನ್ನುವುದು ಗೌತಮ್ ನಿಲುವು.
ಕಡೇಗೊಂದ್ಮಾತು: ಹೊಸತು ಮಾಡಬೇಕು, ಏನು ಮಾಡ್ತೀನೋ ಅದನ್ನು ಚೆನ್ನಾಗೇ ಮಾಡಬೇಕು ಎಂದು ಪ್ರಯತ್ನಿಸಿದಾಗ ಜನ ಮೆಚ್ಚುವ ಉತ್ಪನ್ನಗಳು ಸಿದ್ಧಗೊಳ್ಳುತ್ತವೆ.
ವರ್ಷಾನುಗಟ್ಟಲೆ ಪ್ರಯತ್ನ: ನನಗೆ ಈ ಉದ್ಯಮದ ಬಗ್ಗೆ ಏನೂ ಗೊತ್ತಿರಲಿಲ್ಲ. ತರಬೇತಿ ಪಡೆದುಕೊಂಡೆ. ಅದೂ ಸಾಕಾಗಲಿಲ್ಲ. ಸಿಎಫ್‌ಟಿಆರ್‌ಐ ವಿಜ್ಞಾನಿಯ ಸಹಕಾರದೊಂದಿಗೆ ಸಂಶೋಧನೆಗಳನ್ನು ಮಾಡಿ, ಸಿರಿಧಾನ್ಯದಿಂದ ಹಾಲು ತೆಗೆಯುವುದನ್ನು ಕಂಡುಕೊಂಡೆ. ಇದಕ್ಕಾಗಿ ವರ್ಷಾನುಗಟ್ಟಲೆ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದೇನೆ. ಈಗ ಎಲ್ಲರಿಂದಲೂ ಮೆಚ್ಚುಗೆ ಸಿಗುತ್ತಿದೆ.
: ಗೌತಮ್ ರಾಯಕರ್/ ಲಿಕಿ ಫುಡ್ಸ್ ಮುಖ್ಯಸ್ಥ


























