ಧಾರವಾಡ: ಕಳೆದ ಜೂನ್ ತಿಂಗಳಲ್ಲಿ ಕೃಷಿ ವಿವಿಯಿಂದ ಬಾಹ್ಯಾಕಾಶಕ್ಕೆ ಹಾರಿದ್ದ ಧಾರವಾಡದ ಮೆಂತ್ಯ ಮತ್ತು ಹೆಸರು ಕಾಳುಗಳು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಮೊಳಕೆಯೊಡೆದು ಮರಳಿ ಕೃಷಿ ವಿವಿಗೆ ವಾಪಸ್ ಆಗಿವೆ. ಅವುಗಳನ್ನು ಸದ್ಯ -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಿಡಲಾಗಿದೆ.
ಕಳೆದ ಜೂ. 25ರಂದು ಗಗನಯಾನಿ ಶುಭಾಂಶು ಶುಕ್ಲಾ ಅವರೊಂದಿಗೆ ಆರು ಹೆಸರು ಕಾಳು ಹಾಗೂ ಆರು ಮೆಂತ್ಯ ಕಾಳುಗಳ ಪ್ಯಾಕೇಟ್‌ಗಳನ್ನು ಕಳುಹಿಸಿಕೊಡಲಾಗಿತ್ತು. ಸುಮಾರು 18 ದಿನಗಳವರೆಗೆ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದ ಶುಭಾಂಶು ಶುಕ್ಲ ಅವುಗಳಿಗೆ ಇಂಜಕ್ಷನ್ ಮೂಲಕ ನೀರೆರೆದು ಮೊಳಕೆಯೊಡೆಸುವಲ್ಲಿ ಯಶಸ್ವಿಯಾಗಿ ದ್ದರು. ಬಳಿಕ ಅವುಗಳನ್ನು -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಣೆ ಮಾಡಿಟ್ಟಿದ್ದರು.
ಜು. 15ಕ್ಕೆ ಬಾಹ್ಯಾಕಾಶದಿಂದ ಮೊಳಕೆಯೊಡೆಸಿದ ಮೆಂತ್ಯೆ ಮತ್ತು ಹೆಸರು ಕಾಳುಗಳು ಅಮೆರಿಕಕ್ಕೆ ಬಂದಿಳಿದಿದ್ದವು. ಅಲ್ಲಿಂದ ಕಸ್ಟಮ್ ಅನುಮತಿ ಸೇರಿದಂತೆ ಇತರೆ ಕಾನೂನಾತ್ಮಕ ಕೆಲಸಗಳನ್ನು ಪೂರ್ಣಗೊಳಿಸಿ ಕಳೆದ ಸೆ. 8ರಂದು ಧಾರವಾಡ ಕೃಷಿ ವಿವಿಗೆ ಬಂದಿಳಿದಿವೆ. ಏನೇನು ಅಧ್ಯಯನ?: ಗಗನಯಾತ್ರಿಗಳಿಗೆ ಹೃದಯ ಸಂಬಂಧಿ ಕಾಯಿಲೆ, ಎಲುಬುಗಳ ಸಮಸ್ಯೆ, ರಕ್ತದೊತ್ತಡ ಹೀಗೆ ವಿವಿಧ ಸಮಸ್ಯೆಗಳು ಎದುರಾದಾಗ ಹೆಸರು ಮತ್ತು ಮೆಂತ್ಯೆ ಮೊಳಕೆ ಕಾಳುಗಳನ್ನು ಸೇವನೆ ಮಾಡಿದರೆ ರಕ್ಷಣೆ ಪಡೆಯಬಹುದೆಂದು ಕೃಷಿ ವಿವಿ ಬಾಹ್ಯಾಕಾಶಕ್ಕೆ ಹೆಸರು ಮತ್ತು ಮೆಂತ್ಯೆ ಕಾಳುಗಳನ್ನು ಕಳುಹಿಸಲಾಗಿತ್ತು.
ಕೃಷಿ ವಿವಿಯ ಬಯೋಟೆಕ್ನಾಲಜಿ ವಿಭಾಗಕ್ಕೆ ಬಂದು ತಲುಪಿರುವ ಮೊಳಕೆಯ ಕಾಳುಗಳ ಅಧ್ಯಯನ ಕೃಷಿ ಮೇಳದ ಬಳಿಕ ಪ್ರಾರಂಭವಾಗಲಿದ್ದು, ಅಗತ್ಯಕ್ಕೆ ತಕ್ಕಂತೆ ಕಾಳುಗಳನ್ನು ತೆಗೆದುಕೊಂಡು ಸಂಶೋಧನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಡಾ. ರವಿಕುಮಾರ ಹೊಸಮನಿ.
18 ದಿನಗಳವರೆಗೆ ಬಾಹ್ಯಾಕಾಶದಲ್ಲಿಯೇ ಮೊಳಕೆಯೊಡೆದ ಮೆಂತ್ಯೆ ಮತ್ತು ಹೆಸರು ಕಾಳು ಹಾಗೂ ಅದೇ ಸಮಯಕ್ಕೆ ಕೃಷಿ ವಿವಿಯಲ್ಲಿಯೂ ಕಾಳುಗಳನ್ನು ಮೊಳಕೆಯೊಡೆಸಲಾಗಿತ್ತು. ಬಾಹ್ಯಾಕಾಶದಲ್ಲಿ ಯಾವ ಪ್ರಮಾಣದಲ್ಲಿ ಮೊಳಕೆಯೊಡೆದಿವೆ, ಭೂಮಿಯ ಮೇಲೆ ಎಷ್ಟು ಪ್ರಮಾಣದಲ್ಲಿ ಮೊಳಕೆಯೊಡೆದಿವೆ, ಒಂದು ವೇಳೆ ವ್ಯತ್ಯಾಸಗಳಿದ್ದರೆ ಯಾವ ಕಾರಣಕ್ಕೆ ವ್ಯತ್ಯಾಸ ಆಗಿರಬಹುದು ಎನ್ನುವ ಸಮಗ್ರ ಅಧ್ಯಯನ ಕೈಗೊಳ್ಳಲಾಗುತ್ತಿದೆ.
ಈ ಕುರಿತು ಮಾತನಾಡಿದ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, “ಕೃಷಿ ವಿವಿಯಿಂದ ಬಾಹ್ಯಾಕಾಶಕ್ಕೆ ಕಾಳುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಮೊಳಕೆಯೊಡೆಸಿ ಅದರ ಬಗೆಗೆ ನಮ್ಮ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇದು ವಿವಿ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು” ಎಂದು ಹೇಳಿದರು.