ಹೊಸವರ್ಷದ ರೆಸೊಲ್ಯೂಷನ್

ಹೊಸ ವರ್ಷಕ್ಕೆ ಏನಾದರೂ ರೆಸೊಲ್ಯೂಷನ್ ತೆಗೆದುಕೊಳ್ಳುತ್ತಿದ್ದ ತಿಗಡೇಸಿಯು ಈ ಬಾರಿಯ ಹೊಸ ವರ್ಷಕ್ಕೆ ಹಲವು ನಿರ್ಣಯಗಳನ್ನು ತೆಗೆದುಕೊಂಡು ಹಾಗೆಯೇ ನಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದಾನೆ. ನಾನು ತೆಗೆದುಕೊಂಡ ನಿರ್ಣಯಗಳನ್ನು ಪಾಲಿಸಿಯೇ ಪಾಲಿಸುತ್ತೇನೆ ಎಂದು ಬಯಲನುಮಪ್ಪನ ಗುಡಿಯ ಮುಂದೆ ನಿಂತು ಹುಡಿ ಮಣ್ಣಿನಲ್ಲಿ ಕೈ ಬಡಿದು ಶಪಥ ಮಾಡಿದ್ದಾನೆ. ಇದನ್ನು ನೋಡಿದ ಜನರು ಇದ್ದರೆ ತಿಗಡೇಸಿಯ ಹಾಗೆ ಇರಬೇಕು. ಹೊಸ ವರ್ಷಕ್ಕೆ ತೆಗೆದುಕೊಂಡ ನಿರ್ಣಯಗಳನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಾನೋ ನೋಡಬೇಕು ಅನ್ನುತ್ತಿದ್ದಾರೆ.
ತಿಗಡೇಸಿಯ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಪೈಕಿ…..

  • ಈ ವರ್ಷ ಭಾರೀ ಸಾಲ ಮಾಡಬೇಕು ಸಾಲ ವಾಪಸ್ ಕೊಡುವುದಿಲ್ಲ
  • ಹೆಂಡತಿಯ ಮಾತು ಕೇಳುವುದಿಲ್ಲ-ಬಾಜು ಮನೆಯವರ ಮಾತು ಮೀರುವುದಿಲ್ಲ
  • ಪಕ್ಕದ ಮನೆ ಪೆದ್ದಣ್ಣನಿಗೆ ಅಂಜುವುದಿಲ್ಲ-ಅಳುಕುವುದಿಲ್ಲ
  • ಮಂದಿ ಹೊಲ ಮಾರಿಸಿಯಾದರೂ ಚುನಾವಣೆಗೆ ನಿಲ್ಲುತ್ತೇನೆ
  • ಆದಷ್ಟು ಲವ್ ಮ್ಯಾರೇಜುಗಳನ್ನು ಮಾಡಿಸುತ್ತೇನೆ
  • ಲಾದುಂಚಿರಾಜನ ಕುದುರೆಗೆ ಜಮಾಲ್‌ಘಟ್ಟದ ಗುಳಿಗೆ ತಿನ್ನಿಸುತ್ತೇನೆ
  • ಶೇಷಮ್ಮನ ಹೋಟೆಲ್ ಬಾಕಿ ಯಾವುದೇ ಕಾರಣಕ್ಕೆ ಕೊಡುವುದಿಲ್ಲ
  • ಸಣ್ಣೆಂಕಣ್ಣ-ದೂಲ್ಶರಣ ಇಬ್ಬರನ್ನೂ ಮಣಿಸುತ್ತೇನೆ…
    ನಾನು ಒಂದು ಹೊಸವರ್ಷಕ್ಕೆ ತೆಗೆದುಕೊಂಡ ನಿರ್ಣಯಗಳನ್ನು ಪಾಲಿಸಿಯೇ ಪಾಲಿಸುತ್ತೇನೆ. ಕಳೆದ ಹಲವಾರು ವರ್ಷಗಳಿಂದ ಇದನ್ನೇ ಮಾಡುತ್ತ ಬಂದಿದ್ದೇನೆ. ಈ ಬಾರಿಯೂ ಹಾಗೆಯೇ ಮಾಡುತ್ತೇನೆ. ನಾನು ಇತರರಿಗೆ ಮಾದರಿಯಾಗಿರುತ್ತೇನೆ ಎಂದು ತಿಗಡೇಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾನೆ.