ಹುಬ್ಬಳ್ಳಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ನಗರದ ಹೆಸ್ಕಾಂ ಕಚೇರಿ ಎದುರು ನೂರಾರು ರೈತರು ಪ್ರತಿಭಟನೆ ನಡೆಸಿದ ಪರಿಣಾಮ ಹುಬ್ಬಳ್ಳಿ-ಧಾರವಾಡ ನಡುವಿನ ಸಂಚಾರ ಸೋಮವಾರ ಅಸ್ತವ್ಯಸ್ಥವಾಗಿತ್ತು.
ಬೇಸಿಗೆಯ ಆರಂಭಕ್ಕೂ ಮುನ್ನವೇ ಹೆಸ್ಕಾಂ ಅಧಿಕಾರಿಗಳು ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿದ್ದು, ಪಂಪ್ ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ಒದಗಿಸುವಂತೆ ಆಗ್ರಹಿಸಿ ನವನಗರ ಸಮೀಪದ ಹೆಸ್ಕಾಂ ಕಚೇರಿಯ ಎದುರು ಧಾರವಾಡ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ರೈತರು ಸೋಮವಾರ ಇಡೀ ದಿನ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು.