ಹಿಂದೂ ಧರ್ಮದಲ್ಲಿ ಐಕ್ಯಮತ ಅತ್ಯಗತ್ಯ

0
20

ಬೆಂಗಳೂರು: ಹಿಂದೂ ಧರ್ಮದಲ್ಲಿ ಸದಾಕಾಲ ಐಕ್ಯಮತದ ಅತ್ಯಗತ್ಯವಿದೆ ಎಂದು ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀ ವಿಧುಶೇಖರಭಾರತೀ ಶ್ರೀಗಳು ಪ್ರತಿಪಾದಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ೫೦ನೇ ವರ್ಷದ ಸುವರ್ಣ ಸಂಭ್ರಮ ಸಮ್ಮೇಳನದ ನಿಮಿತ್ತ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಚನ ನೀಡಿದರು. ಐಕ್ಯಮತ್ಯ ಕಾರ್ಯಕ್ರಮ ಬ್ರಾಹ್ಮಣ ಸಮಾಜದಲ್ಲಿ ಮಾತ್ರವಲ್ಲದೆ ಎಲ್ಲ ಧರ್ಮಗಳಲ್ಲಿ ನಿರಂತರವಾಗಿ ನಡೆಯುತ್ತಿರಬೇಕು. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣಾಗಿರಬೇಕು. ಒಂದೇ ಕಣ್ಣಿನಿಂದ ಸಂಪೂರ್ಣವಾಗಿ ಎಲ್ಲವನ್ನು ನೋಡಲು ಆಗುವುದಿಲ್ಲ. ಧರ್ಮಕ್ಕಾಗಿ ಎಲ್ಲರೂ ಕಟಿಬದ್ಧರಾಗಿರಬೇಕು.
ಬ್ರಾಹ್ಮಣ ಸಮಾಜದಲ್ಲಿ ಅನೇಕ ಸಮಸ್ಯೆಗಳು ಇವೆ. ಧರ್ಮದ ವಿಶೇಷ ಆಚರಣೆಯ ಮೂಲಕ ಬ್ರಾಹ್ಮಣ್ಯದ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗಿದೆ. ಭೂಮಿಯ ಮೇಲೆ ಭಗವಂತ ದಶಾವತಾರ ತಾಳಿರುವ ಉದ್ದೇಶ ಧರ್ಮೋದ್ಧಾರವಾಗಿದೆ. ಆಯಾ ಕಾಲಘಟ್ಟದಲ್ಲಿ ರಾಮ, ಕೃಷ್ಣ, ನರಸಿಂಹ, ಗೋವಿಂದ ಹೀಗೆ ಹಲವು ಹೆಸರಿನ ಅವತಾರಗಳಲ್ಲಿ ಸನಾತನ ಕಾಲದಿಂದಲೂ ಧರ್ಮ ರಕ್ಷಣೆ ಮಾಡಿಕೊಂಡು ಭಗವಂತನು ಬಂದಿದ್ದಾರೆ. ಅವರ ಮಾರ್ಗದಲ್ಲಿ ನಾವುಗಳು ನಡೆದುಕೊಂಡು ಧರ್ಮಾಚರಣೆ, ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು.
ಧರ್ಮ ರಕ್ಷಣೆ ಸಂದರ್ಭದಲ್ಲಿ ಅನೇಕ ತಾಪತ್ರೆಯಗಳು ಬರುತ್ತವೆ. ಅವುಗಳನ್ನು ಎದುರಿಸಿಕೊಂಡು ಸತ್ಯದ ಮಾರ್ಗದಲ್ಲಿ ನಡೆಯಬೇಕು. ಅದರ ಜೊತೆಗೆ ಬ್ರಾಹ್ಮಣ ಸಮುದಾಯ ಸಂರಕ್ಷಣೆ ಮಾಡಿಕೊಳ್ಳವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಬಿಡುವಿಲ್ಲದ ಜೀವನದಲ್ಲಿ ಧರ್ಮದ ಕಾರ್ಯವನ್ನು ಮರೆಯುತ್ತಿದ್ದೇವೆ. ದಿನದ ಅಷ್ಟು ಸಮಯದಲ್ಲಿ ಕೆಲ ನಿಮಿಷಗಳ ಕಾಲ ಉಪನಯನ, ಸಂಧ್ಯಾವಂದನೆ, ಗಾಯತ್ರಿ ಮಂತ್ರ ಪಠಣಕ್ಕೆ ಮೀಸಲಿಡಬೇಕು. ಆಚರಣೆ ಎಂಬುದು ಕೇವಲ ನಂಬಿಕೆ ಅಲ್ಲ, ಮೂಲ ಪರಂಪರೆಯ ಮಾರ್ಗಗಳನ್ನು ಸತ್ಯದ ಮಾರ್ಗದಲ್ಲಿ ಅನುಷ್ಠಾನ ಮಾಡಬೇಕು. ಇತ್ತೀಚೆಗೆ ಯಾವುದೇ ಆಚರಣೆಗಳಿಗೆ ವೈಜ್ಞಾನಿಕ ಕಾರಣ ಕೇಳುತ್ತಿದ್ದಾರೆ. ಆದರೆ, ನಮ್ಮ ಪೂರ್ವಜರು ಎಲ್ಲ ಆಚಾರ, ವಿಚಾರಗಳಿಗೆ ವೈಜ್ಞಾನಿಕ ಕಾರಣಗಳನ್ನು ಕಂಡು ಕೊಂಡಿದ್ದರು. ಈಗ ನಮಗೆ ಎಲ್ಲದಕ್ಕೂ ಕಾರಣ ನೀಡಲು ಕಷ್ಟ ಸಾಧ್ಯವಾಗುತ್ತಿದೆ. ಆದರೆ, ಧರ್ಮದ ಅಧ್ಯಯನ ಹಾಗೂ ಆಧುನಿಕ ಜಗತ್ತಿನಲ್ಲಿ ಧರ್ಮದ ಅವಶ್ಯಕತೆ ಎಲ್ಲರಿಗೂ ಇದೆ ಎಂದರು.
ಸ್ವಧರ್ಮದ ರಕ್ಷಣೆ:
ಧರ್ಮದ ಹೆಸರಿನಲ್ಲಿ ಕೆಲವರು ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಗುರು-ಹಿರಿಯರ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕು. ಸಮಾಜದ ಒಳಿತಾಗಿ, ನಮ್ಮೆಲ್ಲರ ಹಿತವನ್ನು ಕಾಪಾಡುವವರ ಮಾತು ಕೇಳಿದಾಗ ಧರ್ಮ ರಕ್ಷಣೆಗೆ ಅರ್ಥ ಬರುತ್ತದೆ. ಲೌಖಿಕವಾಗಿ ಬದುಕು ಕಟ್ಟಿಕೊಂಡಿರುವ ನಾವುಗಳು ಕೇವಲ ಉದ್ಯೋಗ, ಹಣ ಸಂಪಾದನೆಗೆ ಮುಂದಾಗುತ್ತಿದ್ದೇವೆ. ಆ ಸಂಪತ್ತು ಶರೀರ ಇರುವ ತನಕ ನಮ್ಮೊಂದಿಗೆ ಇರುತ್ತದೆ. ಶಾಶ್ವತವಾಗಿರುವುದು ಏಕಮಾತ್ರ ಜ್ಞಾನ,ಪುಣ್ಯ, ಸ್ವಧರ್ಮದ ಆಚರಣೆಯಾಗಿದೆ ಎಂದು ನುಡಿದರು.

ವೇದಾಧ್ಯಯನ ಮುಖ್ಯ
ಭರತ ಭೂಮಿಯಲ್ಲಿ ಎಲ್ಲ ಜೀವಿಗಳಂತೆ ಜೀವಿಸಿ ಹೋಗುವುದರಲ್ಲಿ ಪ್ರಯೋಜನವಿಲ್ಲ. ಉತ್ಕೃಷ್ಠ ಜ್ಞಾನ ಸಂಪಾದನೆಗೆ ವೇದಾಧ್ಯಯನ ಮುಖ್ಯವಾಗಿದೆ ಎಂದು ಆವನಿ ಶೃಂಗೇರಿ ಮಠಾಧೀಶರಾದ ಶ್ರೀ ಅದ್ವೈತಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.
ಪ್ರಪಂಚದ ಯಾವುದೇ ಮೂಲೆಯಲ್ಲಿ ಸಿಗದ ಜ್ಞಾನ ವೇದಗಳಲ್ಲಿ ದೊರೆಯುತ್ತದೆ. ಆದ್ದರಿಂದ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ ಪ್ರತಿಯೊಬ್ಬರು ವೇದಾಧ್ಯಯನ ಮಾಡಬೇಕು. ಪ್ರಪಂಚವನ್ನು ಸುಭಿಕ್ಷೆಯಲ್ಲಿ ಇಟ್ಟುಕೊಂಡು ಹೋಗುವುದಕ್ಕೆ ವೇದಗಳ ಅವಶ್ಯಕತೆ ಇದೆ. ಹಿಂದೂ ಧರ್ಮ ಶಾಸ್ತçಗಳು, ಆಚರಣೆಗಳು ಪ್ರಕೃತಿಯ ಜೊತೆಗೆ ಸಮ್ಮಿಲನಗೊಂಡಿವೆ. ಪಾಶ್ಚಿಮಾತ್ಯರ ಸಂಸ್ಕೃತಿಯಿಂದ ದೂರವಿದ್ದು, ಸ್ವಧರ್ಮದ ಆಚರಣೆ ಮಾಡಬೇಕು. ಬೇರೆಬೇರೆ ಧರ್ಮಗಳಿಗೆ ಒಂದೇ ಧರ್ಮಗ್ರಂಥವಿದೆ. ಆದರೆ, ಹಿಂದೂ ಧರ್ಮದಲ್ಲಿ ಹಲವು ಗ್ರಂಥಗಳಿವೆ ಎಂದು ಕೆಲವು ಪ್ರಶ್ನೆ ಮಾಡುತ್ತಾರೆ. ಸನಾತನ ಧರ್ಮದ ಚರಿತ್ರೆಯನ್ನು ಒಂದೇ ಗ್ರಂಥದ ಮೂಲಕ ತಿಳಿಸಲು ಆಗುವುದಿಲ್ಲ. ಆದ್ದರಿಂದ ಹತ್ತು ಹಲವು ಧರ್ಮಗ್ರಂಥ, ನೀತಿಗಳ ಮೂಲಕ ತಿಳಿಸಲಾಗಿದೆ. ಆದ್ದರಿಂದ ಹಿಂದೂ ಧರ್ಮಕ್ಕೆ ಹಲವು ಗ್ರಂಥಗಳಿವೆ ಎಂಬ ಉತ್ತರವಾಗಿದೆ. ನಮ್ಮ ಪರಂಪರೆ ರಕ್ಷಣೆಗೆ ಋಷಿಮುನಿ, ಯತಿಗಳಿಗೆ ಮಾತ್ರ ಸೀಮಿತವಲ್ಲ, ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದು ಆಶೀರ್ವದಿಸಿದರು.
ಈ ವೇಳೆ ಶೃಂಗೇರಿ ಶಿವಗಂಗಾ ಮಠಾಧೀಶ ಪುರುಷೋತ್ತಮ ಭಾರತೀ ಮಹಾಸ್ವಾಮಿಗಳು, ಮನ್ನೆಲೆಮಾವು ಮಠಾಧೀಶರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

Previous articleಸವಾರನ ಜೀವ‌ ಕಾಪಾಡಿದ ಬಸವರಾಜ ಕ್ಯಾವಟರ್
Next articleಸಮಸ್ಯೆ ಮೆಟ್ಟಿನಿಂತರೆ ತೊಂದರೆ ಇಲ್ಲ: ಹಾರನಹಳ್ಳಿ