ಚಿಕ್ಕಮಗಳೂರು: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರಿಂದ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಸಂಜೆ ನಗರದ ಓಂಕಾರೇಶ್ವರ ಸ್ವಾಮಿ ದೇವಸ್ಥಾನದಿಂದ ಹನುಮಂತಪ್ಪ ವೃತ್ತದವರೆಗೆ ಪಂಜಿನ ಮೆರವಣಿಗೆ ಮೂಲಕ ಮೌನ ಪ್ರತಿಭಟನೆ ನಡೆಸಿದರು.
ಕಾಶ್ಮೀರ ಕಣಿವೆಯಲ್ಲಿ ಹಿಂದೂ ಧರ್ಮಿಯರನ್ನು ಗುರಿಯಾಗಿಸಿಕೊಂಡು ಮತಾಂಧ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರ ಕೃತ್ಯ ನಡೆಸಿದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಓಂಕಾರೇಶ್ವರ ದೇವಸ್ಥಾನದಿಂದ ಪಂಜು ಹಿಡಿದು ಹನುಮಂತಪ್ಪ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಉಗ್ರ ಕೃತ್ಯದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಎಸ್. ಪುಷ್ಪರಾಜ್, ಮುಖಂಡರಾದ ಡಾ. ನರೇಂದ್ರ, ಹಿರೇಮಗಳೂರು ಪುಟ್ಟಸ್ವಾಮಿ, ಕುರುವಂಗಿ ವೆಂಕಟೇಶ್, ಸೀತಾರಾಮ ಭರಣ್ಯ ಮತ್ತಿತರರಿದ್ದರು.