ಹನಿಟ್ರ‍್ಯಾಪ್ ಪ್ರಕರಣ ಸಿಬಿಐಗೆ ವಹಿಸಲಿ

ನವದೆಹಲಿ: ಹನಿಟ್ರ‍್ಯಾಪ್ ಪ್ರಕರಣದ ಹಿಂದೆ ಪ್ರಭಾವಿ ಸಚಿವರಿದ್ದಾರೆಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಇದನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಕೇಂದ್ರ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಹನಿಟ್ರ‍್ಯಾಪ್ ಪ್ರಕರಣಗಳ ಹಿಂದೆ ಯಾವ ಪ್ರಭಾವಿ ಸಚಿವರಿದ್ದಾರೆ? ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಹನಿಟ್ರ‍್ಯಾಪ್ ಜನಪ್ರತಿನಿಧಿಗಳಿಗೆ, ಸಮಾಜಕ್ಕೆ ಒಂದು ಕಳಂಕ, ಕಂಠಕವಾಗಿ ಪರಿಣಮಿಸಿದೆ. ಇದರ ಗಂಭೀರತೆ ಅರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲವೇ ಹೈಕೋರ್ಟ್ ಮಾನಿಟರಿ ಮೂಲಕ ತನಿಖೆ ನಡೆಸಬೇಕು ಎಂದು ಸಲಹೆ ನೀಡಿದರು.
ಹನಿಟ್ರ‍್ಯಾಪ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸುತ್ತಿದೆ. ಕಾಂಗ್ರೆಸ್ ಸಚಿವ ಶಾಸಕರುಗಳೇ ಒಂದೊಂದೇ ವಿಷಯ ಹೊರಗೆಡವುತ್ತಿದ್ದಾರೆ. ಹನಿಟ್ರ‍್ಯಾಪ್ ಅಲ್ಲಿ ಯಾವ ಪ್ರಭಾವಿ ಸಚಿವರ ಕೈವಾಡವಿದೆ? ಎಂಬುದನ್ನು ಸರ್ಕಾರ ಮೊದಲು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಶಾಸಕ-ಸಚಿವರ ವೇತನ ಹೆಚ್ಚಳದ ಅಗತ್ಯವೇನಿತ್ತು?:
ರಾಜ್ಯ ಸರ್ಕಾರ ಸಿಎಂ, ಡಿಸಿಎಂ, ಸಚಿವರು, ಶಾಸಕರುಗಳ ವೇತನ ಹೆಚ್ಚಿಸಿಕೊಂಡಿದೆ. ಇದರ ಅಗತ್ಯವೇನಿತ್ತು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರ ಆರ್ಥಿಕ ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ವೇತನ ಹೆಚ್ಚಳ ಅಪ್ರಸ್ತುತವಾಗಿತ್ತು. ಎರಡು ವರ್ಷಗಳ ಹಿಂದಷ್ಟೇ ವೇತನ ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ ಹೆಚ್ಚಿಸುವುದು ಅಪೇಕ್ಷಣಿಯವಲ್ಲ ಎಂದರು.
ರಾಜ್ಯದ ಜನ ಕುಡಿಯುವ ನೀರು, ರಸ್ತೆ ಮುಂತಾದ ಅಭಿವೃದ್ಧಿಯನ್ನು ಅಪೇಕ್ಷಿಸುತ್ತಿದ್ದಾರೆಯೇ ವಿನಃ ಸಚಿವ-ಶಾಸಕರ ವೇತನ ಹೆಚ್ಚಳವನ್ನಲ್ಲ. ಸ್ವತಃ ಶಾಸಕರೂ ಇದನ್ನು ಬಯಸಿರಲಿಲ್ಲ. ಅಭಿವೃದ್ಧಿಗೆ ಒತ್ತು ಕೊಡುವುದನ್ನು ಬಿಟ್ಟು ತಮ್ಮ ವೇತನ ಹೆಚ್ಚಳ ಮಾಡಿಕೊಂಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರದ ಕಾಮಗಾರಿ ಗುತ್ತಿಗೆಗಳಲ್ಲಿ, ಉದ್ಯೋಗದಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಯಾರೂ ಒಪ್ಪುವುದಿಲ್ಲ. ಸಂವಿಧಾನದಲ್ಲೂ ಇದನ್ನು ಹೇಳಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದನ್ನೆಲ್ಲ ಮಾಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಖಂಡಿಸಿದರು.