ಶಿವಮೊಗ್ಗ: ‘ಭಾರತೀಯ ಸೇನೆಯ ಅಧಿಕಾರಿ’ ಎಂದು ನಂಬಿಸಿ ಶಿವಮೊಗ್ಗದ ವೈದ್ಯೆ ಮತ್ತು ಅವರ ಮನೆಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿಯೊಬ್ಬರಿಗೆ ೩.೭೨ ಲಕ್ಷ ರೂ. ಹಣ ವಂಚಿಸಿದ ಘಟನೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಡಿಯೋ ಕರೆ ಮಾಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದು ನಂಬಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಲ್ಲಿನ ಹೊಳೆಸ್ಟಾಪ್ ಬಳಿ ಇರುವ ಎನ್‌ಸಿಸಿ ಕಚೇರಿಯಿಂದ ಕ್ಯಾಪ್ಟನ್ ಮಾತನಾಡುತ್ತಿರುವುದಾಗಿ ತಿಳಿಸಿ ವ್ಯಕ್ತಿಯೊಬ್ಬ ವೈದ್ಯೆಗೆ (ಹೆಸರು ಗೌಪ್ಯ) ಕರೆ ಮಾಡಿದ್ದ. ಸೇನಾ ವಾಹನದಲ್ಲಿ ಸುಮಾರು ೪೫ ರೋಗಿಗಳನ್ನು ನಿಮ್ಮ ಕ್ಲಿನಿಕ್‌ಗೆ ಕಳುಹಿಸುತ್ತಿರುವುದಾಗಿ ತಿಳಿಸಿದ್ದ. ಈ ಸಂಬಂಧ ಮಾತನಾಡಲು ಕರ್ನಲ್ ಸಂದೀಪ್ ರಾವತ್ ವಿಡಿಯೋ ಕಾಲ್ ಮಾಡುತ್ತಾರೆ. ಅವರ ಜೊತೆಗೆ ಮಾತನಾಡುವಾಗ ಎರಡು ಮೊಬೈಲ್ ಇಟ್ಟುಕೊಳ್ಳಬೇಕು. ಇದು ವಿಡಿಯೋ ಕರೆ ಸ್ವೀಕರಿಸಿದ ವೈದ್ಯೆಗೆ ಸೇನಾ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ತನ್ನನ್ನು ಕರ್ನಲ್ ಸಂದೀಪ್ ರಾವತ್ ಎಂದು ಪರಿಚಯಿಸಿಕೊಂಡಿದ್ದ. ಹಿಂದಿ ಸರಿಯಾಗಿ ಬಾರದ ಹಿನ್ನೆಲೆ ವೈದ್ಯೆ ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೊಬ್ಬರನ್ನು ಕರೆಯಿಸಿಕೊಂಡು ಸೇನಾಧಿಕಾರಿ ಜೊತೆ ಮಾತನಾಡಿಸಿದ್ದರು. ಕರ್ನಲ್ ಸಂದೀಪ್ ರಾವತ್, ವೈದ್ಯೆಯ ಗೂಗಲ್‌ಪೇ ಓಪನ್ ಮಾಡಿಸಿ, ತಾನು ಸೂಚಿಸಿದ ನಂಬರ್‌ಗೆ ೪೯,೫೧೧ ರೂ. ಹಣ ವರ್ಗಾಯಿಸುವಂತೆ ಸೂಚಿಸಿದ್ದ. ಈ ಹಣ ಮರಳಿ ಬರಲಿದೆ. ಇದೆಲ್ಲ ಸೇನಾ ನಿಯಮ ಎಂದು ನಂಬಿಸಿದ್ದ.
ವೈದ್ಯೆಯ ಗೂಗಲ್ ಪೇನಿಂದ ಹಣ ವರ್ಗಾಯಿಸಿಕೊಂಡು ಖಾತೆಯಲ್ಲಿ ಹಣ ಖಾಲಿಯಾದ ಬಳಿಕ ಕರ್ನಲ್ ಸಂದೀಪ್ ರಾವತ್ ವರಸೆ ಬದಲಿಸಿದ್ದ. ವೈದ್ಯೆಗೆ ನೆರವಾಗಲು ಬಂದಿದ್ದ ಬಾಡಿಗೆ ಮನೆಯ ವ್ಯಕ್ತಿಯ ಮೊಬೈಲ್‌ನಿಂದಲೂ ಹಣ ವರ್ಗಾಯಿಸುವಂತೆ ತಾಕೀತು ಮಾಡಿದ್ದ. ಅಂತೆಯೇ ಬಾಡಿಗೆ ಮನೆಯ ವ್ಯಕ್ತಿಯ ಮೊಬೈಲ್‌ನಿಂದ ಹಣ ವರ್ಗಾಯಿಸಲಾಗಿತ್ತು. ವಿಡಿಯೋ ಕರೆ ಕಡಿತವಾದ ಮೇಲೆ ಪುನಃ ಕರೆ ಮಾಡಿದ ಕರ್ನಲ್ ಸಂದೀಪ್ ರಾವತ್, ನಿಮ್ಮ ಹಣ ನಿಮ್ಮ ಖಾತೆಗೆ ಮರಳಲಿದೆ ಎಂದು ಭರವಸೆ ನೀಡಿದ್ದ. ಅನುಮಾನಗೊಂಡ ವೈದ್ಯೆ ಮತ್ತು ಬಾಡಿಗೆ ಮನೆಯ ವ್ಯಕ್ತಿ ಕೂಡಲೆ ೧೯೩೦ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.