ಸಿಲಿಂಡರ್ ಸ್ಫೋಟ ಪ್ರಕರಣ: ಮತ್ತೊಬ್ಬ ಮಾಲಾಧಾರಿ ಸಾವು, ಮೃತರ ಸಂಖ್ಯೆ ಏಳಕ್ಕೆ ಏರಿಕೆ

ಹುಬ್ಬಳ್ಳಿ: ಇಲ್ಲಿನ ಉಣಕಲ್‌ನ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿನ ಅಡುಗೆ ಅನಿಲ(ಸಿಲಿಂಡರ್) ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ೯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ಆರು ಜನ ಮಾಲಾಧಾರಿಗಳು ಮೃತಪಟ್ಟಿದ್ದು, ಮತ್ತೊಬ್ಬ ಮಾಲಾಧಾರಿ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಯಿನಗರದ ನಿವಾಸಿಯಾಗಿರುವ ತೇಜಸ್ ಸಾಕ್ರೆ(ಸತಾರೆ) (೨೬) ಮೃತಪಟ್ಟವರು. ಈತ ಹೊಟೇಲ್‌ವೊಂದರಲ್ಲಿ ಅಡುಗೆ ಕೆಲಸಗಾರನಾಗಿದ್ದ ಎಂದು ತಿಳಿದಿದೆ.
ಗಾಯಗೊಂಡಿದ್ದ ೯ ಮಾಲಾಧಾರಿಗಳ ಪೈಕಿ ಡಿ. ೨೬ರಂದು ನಿಜಲಿಂಗಪ್ಪ ಬೇಪುರಿ ಹಾಗೂ ಸಂಜಯ ಸವದತ್ತಿ ಮೃತಪಟ್ಟಿದ್ದು, ಡಿ. ೨೭ ಶುಕ್ರವಾರ ಉಣಕಲ್ ನಿವಾಸಿ ರಾಜು ಮೂಗೇರ(೧೬) ಹಾಗೂ ಸಾಯಿನಗರ ಲಿಂಗರಾಜ ಬಿರನೂರ(ಚಲವಾದಿ)(೧೯) ಮೃತಪಟ್ಟಿದ್ದರು. ಡಿ. ೨೯ರಂದು ಶಂಕರ್ ಚವ್ಹಾಣ್, ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದರು.
ಸೋಮವಾರ ರಾತ್ರಿ ತೇಜಸ್ ಸಾಕ್ರೆ (ಸತಾರೆ) ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಪ್ರಕಾಶ ಬಾರಕೇರ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಕಾಶ ಬಾರಕೇರ ಅವರ ಪುತ್ರ ವಿನಾಯಕ ಬಾರಕೇರ ಗುಣಮುಖವಾಗುತ್ತಿದ್ದಾನೆ.