ಗದಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ತೆರೆಮರೆ ಕಸರತ್ತು ಜೋರಾಗಿರುವ ಮಧ್ಯೆಯೇ ಕುಂಭಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯೋರ್ವ ಐದು ವರ್ಷ ಸಿದ್ದರಾಮಯ್ಯನೇ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸ್ನಾನ ಮಾಡಿ, ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಗಂಗಾ ನದಿಯಲ್ಲಿ ಮುಳಗಿ ವಿಶೇಷ ಪೂಜೆ ಸಲ್ಲಿಸಿದ ವಿಡಿಯೋ ವೈರಲ್ ಆಗಿದೆ.
ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರದಲ್ಲಿ ಕುರ್ಚಿ ಗಲಾಟೆ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿಯಂತೂ ರಾಜಕೀಯ ನಾಯಕರು ಒಳಗೊಳಗೆ ಗುಂಪು ಕಟ್ಟಿಕೊಂಡು ತಮ್ಮದೇ ಆದ ರಾಜಕೀಯ ತಂತ್ರ ನಡೆಸುತ್ತಿದ್ದಾರೆ.
ಜಿಲ್ಲೆಯ ತಿಮ್ಮಾಪೂರ ಗ್ರಾಮದ ಶಿವಕುಮಾರ ಯತ್ನಟ್ಟಿ ಅನ್ನೋ ಸಿದ್ದರಾಮಯ್ಯನವರ ಅಭಿಮಾನಿ ಕುಂಭಮೇಳದಲ್ಲಿ ಈ ಪ್ರಾರ್ಥನೆ ಸಲ್ಲಿಸಿದ್ದಾನೆ. ಗ್ರಾಮದಲ್ಲಿ ನೂರು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಸಿದ್ದರಾಮಯ್ಯನವರಿಗೆ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ತಿಳಿಸಿದ್ದಾರೆ.
ದೇಶದೆಲ್ಲೆಡೆ ಸದ್ಯ ಕುಂಭಮೇಳದ ಧಾರ್ಮಿಕ ಮಹಾಸಂಗಮದ ಜಾತ್ರೆ ಜೋರಾಗಿದೆ. ಪ್ರಧಾನಿ ಮೋದಿಯಿಂದ ಹಿಡಿದು, ದೇಶ ವಿದೇಶವಲ್ಲಷ್ಟೇ ಅಲ್ಲದೇ, ಜಗತ್ತಿನ ಅನೇಕ ಗಣ್ಯರು, ಸಾಧುಸಂತರು, ರಾಜಕೀಯ ನಾಯಕರು ಎಲ್ಲರೂ ಸಹ ಕುಂಭಮೇಳದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಪೂರೈಕೆಗೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.























