ಸಿಎಂ ಹುದ್ದೆಯನ್ನು ಡಿಕೆ ಒದ್ದು ಕಿತ್ಕೊಳ್ಳೋದು ಯಾವಾಗ ?

0
28

ವಿಧಾನಸಭೆ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿ ಹುದ್ದೆಯನ್ನು ಯಾವಾಗ ಒದ್ದು ಕಿತ್ಕೊತೀರಿ ಹೇಳಿ… ಬೇಗ ಅದನ್ನು ಕಿತ್ತುಕೊಳ್ಳದಿದ್ದರೆ ನಿಮಗೆ ಯೋಗ ಉಳಿಯಲ್ಲ… ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಿವಕುಮಾರ್ ಅವರನ್ನು ಹೀಗೆ ಹಾಸ್ಯಮಯವಾಗಿ ಕಿಚಾಯಿಸಿದ ಪ್ರಸಂಗ ಗುರುವಾರ ನಡೆಯಿತು. ಜೊತೆಗೆ ಇದು ಸಾಕಷ್ಟು ರಂಜನೀಯ ರಾಜಕೀಯ ಚರ್ಚೆಗೂ ದಾರಿ ಮಾಡಿ ಕೊಟ್ಟಿತು.
ಎಸ್.ಎಂ.ಕೃಷ್ಣ ಮಂತ್ರಿ ಮಂಡಲ ರಚನೆ ವೇಳೆ ನನ್ನನ್ನು ಕೈಬಿಟ್ಟಿದ್ದರು. ಜ್ಯೋತಿಷಿ ದ್ವಾರಕನಾಥ ಅವರನ್ನು ಸಂಪರ್ಕಿಸಿ ನೋವು ತೋಡಿಕೊಂಡೆ. ನೀನು ಒದ್ದು ಮಂತ್ರಿಗಿರಿ ಕಿತ್ಕೋ ಎಂದು ದ್ವಾರಕನಾಥ ಹೇಳಿದರು. ಅದರಂತೆ ನಾನು ಕೃಷ್ಣ ಮನೆಗೆ ಹೋದೆ. ನನ್ನೊಂದಿಗೆ ಟಿ.ಬಿ.ಜಯಚಂದ್ರ ಕೂಡ ಇದ್ದರು. ಸಮಯ ತಡರಾತ್ರಿಯಾಗಿ ಹೋಗಿತ್ತು. ಹೋದವನೇ ಅಕ್ಷರಶಃ ಬಾಗಿಲು ಒದ್ದದ್ದೇ… ಎಸ್‌ಎಂಕೆ ಜೊತೆ ಜಗಳಕ್ಕೆ ಬಿದ್ದದ್ದೇ… ಆ ನಂತರವಷ್ಟೇ ಕೃಷ್ಣ ತಮ್ಮ ಪ್ರಥಮ ಮಂತ್ರಿ ಮಂಡಲಕ್ಕೆ ನನ್ನನ್ನು ಸೇರಿಸಿಕೊಂಡಿದ್ದು’ ಎಂದು ಡಿ.ಕೆ ಸದನಕ್ಕೆ ಸ್ವಾರಸ್ಯಕರವಾಗಿ ವಿವರಿಸಿದರು.
ಆಗ ಅಶೋಕ್ ಮಧ್ಯಪ್ರವೇಶಿಸಿದರು. ಹಾಗಿದ್ದರೆ ಸಿಎಂ ಪೋಸ್ಟ್ಅನ್ನು ಯಾವಾಗ ಒದ್ದು ಕಿತ್ಕೋತೀರಿ ಹೇಳಿ; ನಿಮಗೆ ಹೇಳಿದ ಜ್ಯೋತಿಷಿಯೇ ನನಗೂ ಹೇಳಿದ್ದಾರೆ, ಜನವರಿ ನಂತರ ನಿಮ್ಮ ಗ್ರಹಬಲ ಸರಿ ಇಲ್ಲ ಎಂದು... ಹೇಳಿ ಹೇಳಿ. ಆದಷ್ಟು ಬೇಗ ನಿಮ್ಮ ರೋಷಾವೇಶ ಛಲ ತೋರಿಸಿ’ ಎಂದು ಇನ್ನಿಲ್ಲದಂತೆ ಛೇಡಿಸಿದರು. ಆದಷ್ಟು ಬೇಗ ನೀವು ಸಿಎಂ ಆದರೆ ಸ್ವಾಗತಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದರು. ಬಿಜೆಪಿಯ ಉಳಿದ ಸದಸ್ಯರೂ ಅವರಿಗೆ ಧ್ವನಿಗೂಡಿಸಿದಾಗ ಸದನದಲ್ಲಿ ನಗುವೋ ನಗು. ಸ್ವತಃ ಡಿ.ಕೆ.ಶಿವಕುಮಾರ್ ಅವರಂತಹ ಸದನದ ಹಿರಿಯ ರಾಜಕೀಯ ಪಟುವಿಗೂ ಅನಿರೀಕ್ಷಿತ ಪ್ರಶ್ನೆ ಇದಾಗಿತ್ತು. ಅಶೋಕ್ ಕೇಳಿದ ಪ್ರಶ್ನೆ ಹಾಗೂ ತಮ್ಮದೇ ಮಾತಿನ ಎಳೆ ಹಿಡಿದು ಅದನ್ನು ಪ್ರಸಕ್ತ ಸನ್ನಿವೇಶಕ್ಕೆ ಅನ್ವಯಿಸಿದ ರೀತಿಯಿಂದಾಗಿ ಡಿಸಿಎಂ ಉಕ್ಕಿ ಬಂದ ನಗುವನ್ನು ಕಷ್ಟ ಪಟ್ಟು ತಡೆ ಹಿಡಿಯಬೇಕಾಯಿತು. ಪ್ರಸಂಗಾವಧಾನ ಮೆರೆದ ಡಿಕೆ,ಜ್ಯೋತಿಷಿ ಹೇಳಿರುವ ಪ್ರಕಾರ ನಿಮ್ಮ ೨೫ ಶಾಸಕರು ಇತ್ತ ಬರಲು ಸಿದ್ಧರಿದ್ದಾರೆ’ ಎಂದರು. `ಓಹೋ, ಹಾಗಿದ್ದರೆ ನೀವು ಇಲ್ಲಿ (ಬಿಜೆಪಿಗೆ) ಬಂದ ನಂತರ ನಿಮ್ಮನ್ನು ಬೆಂಬಲಿಸಲು ನಮ್ಮ ೨೫ ಜನ ಕಾದಿದ್ದಾರೆ’ ಎಂದು ಅರ್ಥ ಎಂದು ಅಶೋಕ್ ಪ್ರತಿ ಏಟು ನೀಡಿದಾಗ ಇನ್ನಷ್ಟು ಲಘುಲಹರಿಯಲ್ಲಿ ಸದನ ತೇಲಿತು.

Previous articleಲಾರಿ-ಕಾರು ಡಿಕ್ಕಿ: ದಂಪತಿ ಸಾವು
Next articleವಿಶ್ವನಾಥನ್ ಆನಂದ್ ಬಳಿಕ ಅತ್ಯುಚ್ಚ ಸ್ಥಾನ ಅಲಂಕರಿಸಿದ ಶಿಷ್ಯ