ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಲೋಕೋಪಯೋಗಿ, ಗೃಹ, ನಗರಾಭಿವೃದ್ಧಿ, ಕೃಷಿ, ತೋಟಗಾರಿಕೆ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಮೊತ್ತವನ್ನು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಒದಗಿಸಲಾಗಿದೆ
ಬೆಂಗಳೂರು: ಸಿದ್ದರಾಮಯ್ಯ ಅವರು ವಿಪಕ್ಷದಲ್ಲಿದ್ದಾಗ ಸಾಲ ಮಾಡಿ ಹೋಳಿಗೆ ತಿನ್ನಬಾರದು ಎಂದಿದ್ದರು. ಆದರೆ ಅದೇ ಸಿದ್ದರಾಮಯ್ಯ ಅವರು ಈಗ ಸಾಲ ಮಾಡಿ ಬಿರಿಯಾನಿ ತಿನ್ನಿಸಲು ಹೊರಟಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ನಿನ್ನೆ ಮಾತನಾಡಿದ ಅವರು ಶಿಕ್ಷಣ ವಲಯಕ್ಕೆ ಕಾಂಗ್ರೆಸ್ ಸರ್ಕಾರ ಕೇವಲ 10.9%, ಗ್ರಾಮೀಣಾಭಿವೃದ್ಧಿಗೆ ಸುಮಾರು 3% ಗಿಂತಲೂ ಕಡಿಮೆ ಬಜೆಟ್ ಮೀಸಲಿರಿಸಿದೆ. ‘ಸಾಲ ಮಾಡಿ ತುಪ್ಪ ತಿನ್ನಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ಬಾರಿ ₹1.16 ಲಕ್ಷ ಕೋಟಿ ಸಾಲ ಮಾಡುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಇಷ್ಟೊಂದು ಸಾಲ ಮಾಡಿ ಯಾರಿಗೆ ಬಿರಿಯಾನಿ ತಿನ್ನಿಸಲು ಹೊರಟಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.