ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗ : ಅವುಗಳಿಗೆ ಕಿವಿಗೊಡದಿರಲು ಅಧ್ಯಕ್ಷ ಅಶೋಕ ಹಾರನಹಳ್ಳಿ ಸಲಹೆ

0
19

ಇಳಕಲ್: ಬ್ರಾಹ್ಮಣ ಸಮಾಜದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಅವಹೇಳನ ಅಪಮಾನಕ್ಕೆ ಕಿವಿಗೊಡದೇ ನಮ್ಮ ಕರ್ತವ್ಯಗಳನ್ನು ನಾವು ಮಾಡುತ್ತಾ ಹೋಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ ಹಾರನಹಳ್ಳಿ ಕರೆಕೊಟ್ಟರು. ಇಲ್ಲಿನ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶನಿವಾರದಂದು ಮುಂಜಾನೆ ಬ್ರಾಹ್ಮಣ ಸಮಾಜ ತಮಗೆ ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಕೇವಲ ಹತ್ತು ಪ್ರತಿಶತ ಜನ ಮಾತ್ರ ಟೀಕೆಯಲ್ಲಿ ತೊಡಗಿದ್ದು ಉಳಿದ ೯೦ ಪ್ರತಿಶತ ಜನ ಸಮಾಜದೊಂದಿಗೆ ಇದ್ದಾರೆ ಅದನ್ನು ನಾವೆಲ್ಲ ಗೌರವಿಸುವದು ಅಗತ್ಯ ಎಂದು ಹೇಳಿದರು. ಸನಾತನ ಧರ್ಮವನ್ನು ಪಾಲಿಸುವಲ್ಲಿ ಬ್ರಾಹ್ಮಣ ಸಮಾಜ ಮುಂಚೂಣಿಯಲ್ಲಿದ್ದು ಸಮಾಜದ ರಾಜ್ಯ ಸಂಘದ ವತಿಯಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಔದ್ಯೋಗಿಕ ಸಮ್ಮೇಳನವನ್ನು, ನವೆಂಬರ್ ತಿಂಗಳಲ್ಲಿ ಯತಿಗಳ ಸಮ್ಮೇಳನವನ್ನು ಮತ್ತು ಡಿಸೆಂಬರ್ ತಿಂಗಳಲ್ಲಿ ಮಹಿಳಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವದು ಅದಕ್ಕಾಗಿ ಎಲ್ಲಾ ತಯಾರಿ ನಡೆದಿದೆ ಎಂದ ಅವರು ಉತ್ತರ ಕರ್ನಾಟಕಕ್ಕೆ ಬೆಂಗಳೂರು ದೂರ ಆಗುವದರಿಂದ ಈ ಭಾಗದ ಜನರಿಗೆ ಅನುಕೂಲ ಆಗುವಂತೆ ಹಾವೇರಿಯಲ್ಲಿ ಒಂದು ಕಚೇರಿಯನ್ನು ತೆಗೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಜನರಿಗೆ ಅನುಕೂಲ ಮಾಡಿಕೊಡುವ ಕಾನೂನು ತಂದರೂ ಅದಕ್ಕೆ ಸ್ಪಷ್ಟತೆಯನ್ನು ನೀಡದೇ ಹೋಗಿದ್ದರಿಂದ ಬ್ರಾಹ್ಮಣ ಜನರಿಗೆ ತೊಂದರೆ ಆಗುತ್ತಲೇ ಇದೆ ಅದಕ್ಕಾಗಿ ಹೋರಾಟ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಧಾಕರಬಾಬು, ಹಿರಣ್ಣಯ್ಯ, ಕಾರ್ತಿಕ ಬಾಪಟ್ ಇವರನ್ನು ಬ್ರಾಹ್ಮಣ ಸಮಾಜದ ವತಿಯಿಂದ ಆತ್ಮೀಯವಾಗಿ ಸತ್ಕರಿಸಲಾಯಿತು ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ ವಹಿಸಿದ್ದರು. ರಾಮಚಂದ್ರ ಶಾಸ್ತ್ರಿ ಪ್ರಾರ್ಥಿಸಿದರು , ಬಂಡು ಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ್ ಪದಕಿ ನಿರೂಪಿಸಿ ವಂದಿಸಿದರು.

Previous articleರೈಲಿನಲ್ಲಿ ಅಗ್ನಿ ಅವಘಡ: 10 ಜನ ಮೃತ್ಯು
Next articleವೆಂಕಟೇಶ ದರ್ಶನ ಪಡೆದ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು