ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ಕಾಯ್ದೆ ರಚನೆ

0
6
hkpatil

ಹುಬ್ಬಳ್ಳಿ: ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ಕಾಯ್ದೆ ರಚನೆ ಮಾಡಲು ಸರ್ಕಾರ ಚಿಂತನೆ ಮಾಡಿದ್ದು, ಜುಲೈ 3ರಿಂದ ನಡೆಯುವ ಅಧಿವೇಶನದಲ್ಲಿ ಈ ಕುರಿತ ವಿಧೇಯಕ ಮಂಡನೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಇಲ್ಲಿನ ಕರ್ನಾಟಕ ಕಾನೂನು ವಿವಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ವ್ಯಾಜ್ಯಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಸರ್ಕಾರಿ ವ್ಯಾಜ್ಯ ವ್ಯಾಪ್ತಿಯಲ್ಲಿನ ಬಡವರ ಕಟ್ಲೆಗಳು ಬೇಗ ಇತ್ಯರ್ಥವಾಗಬೇಕು. ಕಟ್ಲೆಗಳು 5, 6, 10 ವರ್ಷ ಹಾಗೆಯೇ ಉಳಿದರೆ ಬಡವರಿಗೆ ತೊಂದರೆಯಾಗುತ್ತದೆ. ಒಂದು ಹಂತದಲ್ಲಿ ಕೈ ಬಿಟ್ಟು ಬಿಡುತ್ತಾನೆ. ಈ ಪರಿಸ್ಥಿತಿ ಬದಲಾಗಬೇಕು. ಇಂತಹ ವ್ಯಾಜ್ಯಗಳು ಬೇಗ ಇತ್ಯರ್ಥವಾಗಬೇಕು ಎಂಬ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತರುತ್ತಿದ್ದೇವೆ ಎಂದರು.
ಮತಾತಂರ ಕಾಯ್ದೆ ಹೆಸರಿನಲ್ಲಿ ಭಯ ಹುಟ್ಟಿಸುವಂತಹ ಕೆಲವು ಕಲಂಗಳನ್ನು ಹಿಂದಿನ ಸರ್ಕಾರ ತಂದಿತ್ತು. ಅವುಗಳನ್ನು ಹಿಂದಕ್ಕೆ ಪಡೆದು ಸಂವಿಧಾನದ ಸದಾಶಯದಂತೆ ಏನು ಮಾಡಬೇಕೊ ಆ ರೀತಿ ಕಾನೂನು ಬದಲಾವಣೆ ಮಾಡುತ್ತಿದ್ದೇವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಎಪಿಎಂಸಿ ಕಾಯ್ದೆಯನ್ನೂ ಹಿಂದಿನ ಸರ್ಕಾರ ಸಡಿಲಗೊಳಿಸಿತ್ತು. ಅದನ್ನೂ ಬದಲಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದೇಶದಲ್ಲೇ ಅತ್ಯುತ್ತಮ ಕಾನೂನು ವಿವಿ ಮಾಡ್ತೇವೆ
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಇನ್ನೂ ಅನೇಕ ರೀತಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕಿದೆ. ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಎಲ್ಲ ಮೂಲಸೌಕರ್ಯಗಳನ್ನು ಎರಡು ವರ್ಷದಲ್ಲಿ ಒದಗಿಸಲಾಗುವುದು. ಪ್ರಸ್ತಾವನೆ ಸಲ್ಲಿಸಲು ಕುಲಪತಿಗಳಿಗೆ ಇಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದ್ದೇನೆ ಎಂದರು.
ಕಳೆದ 8-10 ವರ್ಷದಲ್ಲಿ ಯಾವ ಮಟ್ಟದಲ್ಲಿ ಈ ವಿವಿಗೆ ಮೂಲಸೌಕರ್ಯ, ಪ್ರೋತ್ಸಾಹ ಸರ್ಕಾರ ನೀಡಬೇಕಿತ್ತೋ ಅದನ್ನು ಮಾಡಿರಲಿಲ್ಲ. ಹೀಗಾಗಿ, ಮೂಲಸೌಕರ್ಯ ಕೊರತೆ ಇದೆ. ನಮ್ಮ ಸರ್ಕಾರ ಅದೆಲ್ಲವನ್ನೂ ಹೋಗಲಾಡಿಸಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ಕಾನೂನು ವಿಶ್ವವಿದ್ಯಾಲಯವನ್ನಾಗಿ ರೂಪಿಸುತ್ತದೆ ಎಂದರು.

Previous articleಮಹಿಳಾ ಪ್ರಯಾಣಿಕರ ಲೆಕ್ಕ ತಪ್ಪಿಸುವ ಕೆಲಸ: ಸರ್ಕಾರದ ಬೊಕ್ಕಸಕ್ಕೆ ಹೊರೆ
Next articleಅವಕಾಶ ಕೊಟ್ಟರೆ ನಾನು ರಾಜ್ಯಾಧ್ಯಕ್ಷನಾಗುವೆ