ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯ ರಕ್ಷಣೆ

0
30

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ವಿದ್ಯಾರ್ಥಿನಿಯನ್ನು ಜೀವರಕ್ಷಕ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಸೇರಿ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಮಾಡೂರುವಿನ ಬಾಡಿಗೆ ಮನೆಯಲ್ಲಿ ವಾಸವಿರುವ ಯುವತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿರುವ ಈಕೆ, ಇಂದು ಬೆಳಿಗ್ಗೆ ಸಮುದ್ರ ತೀರದ ರುದ್ರ ಪಾದೆಯಿಂದ ನೀರಿಗೆ ಜಿಗಿದಿದ್ದಾಳೆ. ರುದ್ರಪಾದೆಯಲ್ಲಿದ್ದ ಹೊರ ರಾಜ್ಯದ ವಲಸೆ ಕಾರ್ಮಿಕನೋರ್ವನು ತಕ್ಷಣವೇ ನೀರಿಗೆ ಜಿಗಿದು ಯುವತಿಯನ್ನ ರಕ್ಷಿಸಿ ದಡದತ್ತ ಎಳೆಯಲು ಮುಂದಾಗಿದ್ದ. ಆದರೆ ಯುವತಿಯು ಪ್ರಾಣ ಸಂಕಟದಿಂದ ರಕ್ಷಿಸಲು ಬಂದ ವಲಸೆ ಕಾರ್ಮಿಕನನ್ನೇ ಗಟ್ಟಿಯಾಗಿ ಬಿಗಿದಪ್ಪಿದ್ದು, ಇಬ್ಬರೂ ನೀರುಪಾಲಾಗುವ ಪರಿಸ್ಥಿತಿ ಎದುರಾಗಿತ್ತು. ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸುಜಿತ್ ಎಂಬವರು ಟಯರ್ ಟ್ಯೂಬ್ ಮೂಲಕ ಯುವತಿ ಮತ್ತು ವಲಸೆ ಕಾರ್ಮಿಕನನ್ನು ದಡಕ್ಕೆ ಎಳೆದು ರಕ್ಷಿಸಿದ್ದಾರೆ. ಸ್ಥಳೀಯರು ಸಹಕಾರ ನೀಡಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Previous articleಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯ
Next articleದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ