ಉಡುಪಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತವರ ಮಕ್ಕಳ ವಿರುದ್ಧ ತೊಡೆತಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಎಸ್.ಈಶ್ವರಪ್ಪ ಭಾನುವಾರ ಬೈಂದೂರಿನ ಉಪ್ಪುಂದದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಹಂಚಲು ಸಿದ್ಧಪಡಿಸಿದ್ದ ಬಿರಿಯಾನಿ ಲಭಿಸದ ಘಟನೆ ನಡೆದಿದೆ.
ಬಿರಿಯಾನಿ ಸಿದ್ಧಪಡಿಸುತ್ತಿರುವ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ದಾಳಿ ನಡೆಸಿದರು. ಈಶ್ವರಪ್ಪ ಆಯೋಜಿಸಿದ್ದ ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರಿಗೆ ಮಧ್ಯಾಹ್ನದ ಊಟಕ್ಕೆಂದು ಬಿರಿಯಾನಿ ಕೂಡ ಸಿದ್ಧಪಡಿಸಲಾಗಿತ್ತು. ಆದರೆ, ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದು, ಬಿರಿಯಾನಿ ಹಂಚಿದಲ್ಲಿ ಚುನಾವಣೆ ವೆಚ್ಚಕ್ಕೆ ಸೇರಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಹಾಗಾಗಿ ತಯಾರಿಸುತ್ತಿದ್ದ ಬಿರಿಯಾನಿ ಹಂಚದೇ ಬಾಕಿಯಾಗಿದ್ದು, ಬಿರಿಯಾನಿಗಾಗಿ ಕಾದು ಸುಸ್ತಾದ ಕಾರ್ಯಕರ್ತರು, ತಿನ್ನದೇ ವಾಪಸಾದರು.

























