ಸಚಿವ ಸ್ಥಾನ ನೀಡುವುದು ಪಕ್ಷದ ನಾಯಕರಿಗೆ ಬಿಟ್ಡ ವಿಚಾರ

0
14
ವಿಧಾನ ಪರಿಷತ್ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸನ್ಮಾನಿಸಿದರು. ಕಾಂಗ್ರೆಸ್ ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಹಾಗೂ ಇತರರಿದ್ದರು.

ಹುಬ್ಬಳ್ಳಿ : ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿರುವುದು ಜನಪರ ಕೆಲಸ ಮಾಡಲು ಸಿಕ್ಕಿರುವ ಅವಕಾಶ. ಇದು ನನ್ನ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭ. ಸಚಿವ ಸ್ಥಾನ ಸೇರಿದಂತೆ ಸ್ಥಾನಮಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ವಿಧಾನ ಪರಿಷತ್ ನೂತನ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಪರಿಷತ್‌ಗೆ ಆಯ್ಕೆಯಾದ ಬಳಿಕ ಶನಿವಾರ ನಗರಕ್ಕೆ ಆಗಮಿಸಿದ ವೇಳೆ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ನನ್ನ ರಾಜಕೀಯ ಹೊಸ ಮನ್ವಂತರಕ್ಕೆ ಕಾರಣರಾದ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ಸ್ಥಾನದ ಅಪೇಕ್ಷೆ ಇಲ್ಲ. ಸಚಿವ ಸ್ಥಾನ, ಸ್ಪೀಕರ್ ಸ್ಥಾನ ಕೊಡುವುದು ಪಕ್ಷದ ನಾಯಕರಿಗೆ ಬಿಟ್ಡ ವಿಚಾರ ಎಂದರು.
ಪರಿಷತ್ ಸದಸ್ಯನಾಗಿ ವಿಶೇಷವಾಗಿ ಈ ಭಾಗದ ವಿಷಯಗಳ ಬಗ್ಗೆ ಸದನದಲ್ಲಿ ಹೆಚ್ಚು ಪ್ರಸ್ತಾಪ ಮಾಡುತ್ತೇನೆ. ಒದಗಿದ ಅವಕಾಶ ಸೂಕ್ತವಾಗಿ ಬಳಕೆ ಮಾಡಿಕೊಳ್ಳುತ್ತೇನೆ ಎಂದರು.
ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲಲಿದೆ. ಉತ್ತರ ಕರ್ನಾಟಕದಲ್ಲಿನ 11 ಲೋಕಸಭಾ ಕ್ಷೇತ್ರಗಳಲ್ಲಿ 6-7 ಸ್ಥಾನಗಳನ್ನು ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಏನೇ ಜವಾಬ್ದಾರಿ ವಹಿಸಿದರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.

Previous articleಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್
Next articleರಾಜೀನಾಮೆ ಕೊಟ್ಟಿಲ್ಲ: ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ