ಸಂಸ್ಕೃತ ವಿದ್ವಾಂಸ ಪಿಯರೆ ಫಿಲಿಯೋಜಾ ನಿಧನ

0
10

ಪ್ಯಾರಿಸ್: ಫ್ರೆಂಚ್ ಸಂಜಾತ ಸಂಸ್ಕೃತ ವಿದ್ವಾಂಸ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಪಿಯರೆ ಸಿಲ್ವನ್ ಫಿಲಿಯೋಜಾ (೮೮) ಶನಿವಾರ ಸಂಜೆ ಪ್ಯಾರಿಸ್‌ನಲ್ಲಿ ನಿಧನರಾದರು. ಅವರು ಖ್ಯಾತ ಸಂಶೋಧಕರೂ ಇತಿಹಾಸಶಾಸ್ತ್ರಜ್ಞರೂ ಆದ ಪತ್ನಿ ವಸುಂಧರಾ ಫಿಲಿಯೋಜಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

೧೯೩೬ರ ಫೆಬ್ರವರಿ ೧೫ರಂದು ಜನಿಸಿದ ಅವರು, ಪ್ಯಾರಿಸ್‌ನಲ್ಲಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪದವಿ ಪಡೆದರು. ೧೯೬೨ರಲ್ಲಿ ಕಾವ್ಯ-ಛಂದಸ್ಸಿಗೆ ಸಂಬಂಧಿಸಿದ ಸಂಸ್ಕೃತ ಅಲಂಕಾರಶಾಸ್ತ್ರ ಗ್ರಂಥ ವಿದ್ಯಾನಾಥನ ‘ಪ್ರತಾಪರುದ್ರೀಯ’ದ ಕುರಿತು ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದರು. ೧೯೬೭ರಿಂದ ೨೦೦೪ರವರೆಗೆ ಪ್ಯಾರಿಸ್‌ನಲ್ಲಿರುವ ಉನ್ನತ ಅಧ್ಯಯನ ಕೇಂದ್ರದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು.

ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ಪಿಯರೆ; ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತ ಭಾಷಾಶಾಸ್ತ್ರ, ವ್ಯಾಕರಣಶಾಸ್ತ್ರ, ಹಸ್ತಪ್ರತಿ ಲಿಪಿಶಾಸ್ತ್ರ, ಶಾಸನಶಾಸ್ತ್ರ, ಶೈವಾಗಮ ಶಾಸ್ತ್ರ, ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರಗಳಲ್ಲಿ ಅಪಾರ ಸಂಶೋಧನೆ ನಡೆಸಿದ್ದರು. ಪಾಣಿನಿ ವಿರಚಿತ ವ್ಯಾಕರಣ ಗ್ರಂಥ ಅಷ್ಟಾಧ್ಯಾಯಿಗೆ ಪತಂಜಲಿ ಬರೆದಿದ್ದ ಮಹಾಭಾಷ್ಯ ವ್ಯಾಖ್ಯಾನವನ್ನು ಫ್ರೆಂಚ್‌ಗೆ ಅನುವಾದಿಸಿದ್ದರು. ಕಳೆದ ಐವತ್ತು ವರ್ಷಗಳಿಂದ ಪ್ರತಿ ವರ್ಷ ಆರು ತಿಂಗಳ ಕಾಲ ಪತ್ನಿಯ ಜೊತೆ ಹಂಪಿಯಲ್ಲಿ ಸಂಶೋಧನಾ ಕಾರ್ಯ ನಡೆಸಿದ್ದರು. ಕರ್ನಾಟಕದ ಭವ್ಯ ಪರಂಪರೆ ಮತ್ತು ಇತಿಹಾಸವನ್ನು ನಿರೂಪಿಸುವ ಶಿಲ್ಪಕಲಾ ಸೌಂದರ್ಯದ ವರ್ಣರಂಜಿತ ಚಿತ್ರಗಳುಳ್ಳ ‘ಹಂಪಿ: ಪವಿತ್ರ ಭಾರತ, ವೈಭವಯುತ ಭಾರತ’ ಎಂಬ ಕೃತಿಯನ್ನು ಕೆಲವು ವರ್ಷಗಳ ಹಿಂದೆ ಪ್ರಕಟಿಸಿದ್ದರು. ೨೩ ಗ್ರಂಥಗಳು ಹಾಗೂ ೨೫೦ಕ್ಕೂ ಹೆಚ್ಚು ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿರುವ ಅವರು ಭಾರತೀಯ ಸಂಸ್ಕೃತಿಯ ಜಾಗತಿಕ ಪ್ರತಿನಿಧಿಯಂತಿದ್ದರು.

ಬಹುಮುಖ ಪ್ರತಿಭೆಯ ಅವರು ಖ್ಯಾತ ವರ್ಣಚಿತ್ರ ಕಲಾವಿದರೂ ಆಗಿದ್ದರು. ಅವರು ರಚಿಸಿದ ಅನೇಕ ತೈಲಚಿತ್ರಗಳು ವಿವಿಧ ದೇಶಗಳಲ್ಲಿರುವ ಫ್ರೆಂಚ್ ದೂತಾವಾಸ ಕಚೇರಿಗಳಲ್ಲಿವೆ. ಸಂಸ್ಕೃತ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರಿಗೆ ೨೦೨೪ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ, ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿದ್ಯಾಪೀಠದಿಂದ ಮಹಾಮಹೋಪಾಧ್ಯಾಯ ಗೌರವ, ಭಾರತದ ರಾಷ್ಟ್ರಪತಿಗಳಿಂದ ಗೌರವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿದ್ದವು.

Previous article‘ನಾನು ಯಾವುದೇ ಸರ್ಕಾರದ ಹಿಂಬಾಲಕನಲ್ಲ’
Next articleವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ದೂರಿ ತೆರೆ