ಸಂಪಾಜೆ ಯಕ್ಷೋತ್ಸವ: ಶ್ರೀ ಕೇಶವಾನಂದ ಭಾರತೀ ಶ್ರೀ ಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ

0
10
ಸಂಪಾಜೆ

ಸುಳ್ಯ: ಸಂಪಾಜೆ ಯಕ್ಷೋತ್ಸವ ಎಂದರೆ ಅದು ಕಲೆ, ಸಂಸ್ಕೃತಿಯ ಉತ್ಸವ, ಧರ್ಮ, ಕಲೆ, ನ್ಯಾಯದ ಸಮನ್ವಯತೆಯಾಗಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಹಾಗು ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಹೇಳಿದ್ದಾರೆ. ದಕ್ಷಿಣ‌ ಕನ್ನಡ ಜಿಲ್ಲೆಯ ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆದ ಯಕ್ಷೋತ್ಸವ, ಬ್ರಹ್ಮಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ನೀಡುವ ಶ್ರೀ ಕೇಶವಾನಂದ‌ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಹಲವು ದಶಕಗಳಿಂದ ಯಕ್ಷೋತ್ಸವ ನಡೆಸುವ ಮೂಲಕ ಕಲೆಯ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಲಾಗುತಿದೆ. ಕಲಾವಿದರನ್ನು ಪ್ರೋತ್ಸಾಹಿಸಲಾಗುತಿದೆ. ಜೊತೆಗೆ ಗುರು ಸ್ಮರಣೆ,ಪ್ರಶಸ್ತಿ ಪ್ರದಾನ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡಿಗೆ ಉತ್ಸವದ‌ ವಾತಾವರಣ ಸೃಷ್ಠಿಸುವುದು ಶ್ಲಾಘನೀಯ ಎಂದು ಅವರು ಹೇಳಿದರು. ಸಮಾರಂಭವನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಳ್ಯ ತಾಲೂಕು ಕರ್ನಾಟಕ ಮುಸ್ಲೀಂ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಕೀಲಾರು ಸಂಸ್ಮರಣಾ ಭಾಷಣ ಮಾಡಿದರು. ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಗುರುವಂದನೆ ಸಲ್ಲಿಸಿದರು.


ಪ್ರಶಸ್ತಿ ಪ್ರದಾನ:
ಮಾಜಿ ಅಡ್ವಕೇಟ್ ಜನರಲ್ ಹಾಗು ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರಿಗೆ ಶ್ರೀ ಕೇಶವಾನಂದ‌ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ಕೇಶವಾನಂದ‌ ಭಾರತೀ ಶೈಕ್ಷಣಿಕ ಪ್ರಶಸ್ತಿಯನ್ನು ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರಿಗೆ, ಶ್ರೀ ಕೇಶವಾನಂದ ಭಾರತಿ ಸಂಗೀತ ಪ್ರಶಸ್ತಿಯನ್ನು ಸಂಗೀತ ಕಲಾವಿದ ಆನೂರು ಅನಂತ ಕೃಷ್ಣ ಶರ್ಮ ಅವರಿಗೆ, ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾದ್ವರ್ಯ ಪ್ರಶಸ್ತಿಯನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಕಲಾಪೋಷಕ ಪ್ರಶಸ್ತಿಯನ್ನು ಹಿರಿಯ ನ್ಯಾಯವಾದಿ ಕೆ.ಶಶಿಕಿರಣ ಶೆಟ್ಟಿ ಬೆಂಗಳೂರು, ವೈದಿಕ ಪ್ರಶಸ್ತಿಯನ್ನು ಮೂಡಬಿದ್ರೆ ಬಡಗು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಆಲಂಗಾರು ಈಶ್ವರ ಭಟ್ ಅವರಿಗೆ ಪ್ರದಾನ ಮಾಡಲಾಯಿತು.
ಯಕ್ಷೋತ್ಸವ ಸನ್ಮಾನವನ್ನು ಯಕ್ಷಗಾ‌ನ ಕಲಾವಿದ ಜಗದಾಭಿರಾಮ ಪಡುಬಿದ್ರೆ ಅವರಿಗೆ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲರಾದ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ, ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್, ಯಕ್ಷಗಾನ‌ ಕಲಾವಿದ ವಾಸುದೇವ ರಂಗಾಭಟ್ ಅಭಿನಂದನಾ ಭಾಷಣ ಮಾಡಿದರು. ಕೀಲಾರು ಪ್ರತಿಷ್ಠಾನದ ರಾಜಾರಾಮ ಕೀಲಾರು, ಟಿ.ಶ್ಯಾಮ್ ಭಟ್, ಸುಮನಾ ಶ್ಯಾಮ್ ಭಟ್ ಉಪಸ್ಥಿತರಿದ್ದರು.

Previous articleಮಂಡ್ಯ ನಂಬರ್‌ 1 ಮಾಡಲು ಬದ್ಧ: ಬೊಮ್ಮಾಯಿ
Next articleಕಾಂಗ್ರೆಸ್‌ಗೆ ಮಾಜಿ ಸಿಎಂ ರಾಜೀನಾಮೆ