ಶ್ರೀರಾಮುಲುಗೆ ಬಿಜೆಪಿ ಹೈಕಮಾಂಡ್ ಅಭಯ: ಡೆಲ್ಲಿಗೂ ಬುಲಾವ್

ರಾಮುಲು

ಬಳ್ಳಾರಿ: ಸಂಡೂರು ಉಪಚುನಾವಣೆ ಸೋಲಿನ ವಿಚಾರಕ್ಕೆ ಕೋರ್ ಕಮಿಟಿಯಲ್ಲಿ ಅಗೌರವ ಎದುರಿಸಿದ್ದ ಮಾಜಿ ಸಚಿವ ಬಳ್ಳಾರಿ ಬುಲ್ಲೋಡು ಬಿ.ಶ್ರೀರಾಮಲು ಅವರಿಗೆ ಬಿಜೆಪಿ ಹೈಕಮಾಂಡ್ ಅಭಯ ನೀಡಿದೆ. ನಿನ್ನೊಂದಿಗೆ ನಾವಿದ್ದೇವೆ ಅವಸರದ ನಿರ್ಧಾರ ತೆಗೆದುಕೊಳ್ಳಬೇಡ, ಏನೇ ಇದ್ದರೂ ದೆಹಲಿಗೆ ಬಾ ನೋಡಿಕೊಳ್ಳೋಣ ಎಂದಿದ್ದಾರೆ.
ಬಳ್ಳಾರಿಯ ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಅವರೇ ಸ್ವತಃ ಈ ಅಂಶವನ್ನು ಹಾಕಿದ್ದಾರೆ. ಕೋರ್‌ಕಮಿಟಿಯಲ್ಲಿ ನಡೆದ ಘಟನೆ ಕುರಿತು ರಾಜ್ಯ, ರಾಷ್ಟ್ರ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ನನ್ನ ಪರವಾಗಿ ನಿಂತಿದ್ದಾರೆ. ದೆಹಲಿಗೂ ಬರುವಂತೆ ಹೇಳಿದ್ದಾರೆ. ಮುಂದಿನ ವಾರ ದೆಹಲಿಗೆ ಹೋಗುತ್ತೇನೆ ಎಂದಿರುವ ರಾಮುಲು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನನಗೆ ದೂರವಾಣಿ ಕರೆ ಮಾಡಿ ಸಮಾಧಾನ ಹೇಳಿದ್ದಾರೆ.
ಇಲ್ಲಿನ ಪರಿಸ್ಥಿತಿ ಏನು ಎನ್ನುವುದನ್ನು ನಡ್ಡಾ ಅವರಿಗೆ ವಿವರಿಸಿದ್ದೇನೆ. ಕೋರ್ ಕಮಿಟಿಯಲ್ಲಿ ರಾಧಾಮೋಹನ್‌ದಾಸ್ ಅಗರವಾಲ್ ನಡೆದುಕೊಂಡ ಬಗ್ಗೆಯೂ ಹೇಳಿದ್ದೇನೆ. ಇದಕ್ಕೆ ನಡ್ಡಾ ಅವರು ‘ರಾಮುಲು ನಿನ್ನ ಪರವಾಗಿ ನಾವಿದ್ದೇವಿ. ಯಾವುದೇ ಯೋಚನೆ ಮಾಡಬೇಡ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಅವರಿಗೂ ವಿಷಯ ತಿಳಿಸಿದ್ದೇವೆ. ಅವರು ಕೂಡ ನಿನ್ನ ಪರವಾಗಿ ಮಾತನಾಡಿದ್ದಾರೆ. ನೀನು ಕೆಳ ಮಟ್ಟದಿಂದ ಬೆಳೆದ ನಾಯಕ. ಅವಸರದ ನಿರ್ಧಾರ ಮಾಡಬೇಡ. ದೆಹಲಿಗೆ ಬಂದು ಭೇಟಿಯಾಗು ಎಂದಿದ್ದಾರೆ.
ರಾಮುಲು ಕೂಡ ಅವರ ಅಪಾಯಿಂಟ್ಮೆಂಟ್ ತೆಗೆದುಕೊಂಡು ಹೋಗಿ ದೆಹಲಿ ವರಿಷ್ಠರನ್ನು ಭೇಟಿ ಮಾಡುತ್ತೇನೆ. ನಾನು ಪಕ್ಷಕ್ಕಾಗಿ ದುಡಿದಿದ್ದಕ್ಕೆ ಕೂಲಿ ಕೇಳುತ್ತೇನೆ. ನನಗೆ ಅಪಮಾನ ಮಾಡಬೇಡಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಹಿರಿಯರು ನನ್ನ ಜತೆಗಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದಜೋಷಿ, ಸದಾನಂದಗೌಡ್ರು, ಆರ್.ಅಶೋಕ, ಬಸವರಾಜ ಬೊಮ್ಮಾಯಿ, ವಿಜಯೇಂದ್ರ ಸೇರಿ ಎಲ್ಲರೂ ನನ್ನ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಎಲ್ಲ ಶಾಸಕರು, ಮಾಜಿ ಶಾಸಕರುಗಳು ನನ್ನ ಮನೆಗೆ ಬಂದು ಭೇಟಿ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ಹೇಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕೋರ್ ಕಮಿಟಿಯಲ್ಲಿನ ಘಟನೆಯಿಂದ ನೋವಾಗಿರುವ ಬಗ್ಗೆ ಎಲ್ಲರೂ ಮಿಡಿದಿದ್ದಾರೆ. ಅಗರವಾಲ್ ಸಹಿತ ತಮ್ಮ ಮಾತು ಹಿಂದಕ್ಕೆ ತಗೊಳ್ಳೋದಾಗಿ ಹೇಳಿದ್ದಾರೆ. ಹೀಗಾಗಿ ಎಲ್ಲರ ಮೇಲೂ ನನ್ನ ಮೇಲೆ ವಿಶ್ವಾಸವಿದೆ. ನನ್ನ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಸಾಧ್ಯ ಆದಷ್ಟು ಅಳಿಲು ಸೇವೆ ಸಲ್ಲಿಸಿದ್ದೀನಿ. ಅದನ್ನ ಗುರುತಿಸಿ ಎಲ್ಲರೂ ನನ್ನ ಪರವಾಗಿ ಮಾತನಾಡಿದ್ದಾರೆ. ನನ್ನನ್ನು ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಸಿದ್ಧರಿಲ್ಲ. ಹೀಗಾಗಿ ಇನ್ಮುಂದೆ ಎಲ್ಲವನ್ನೂ ನಾಲ್ಕು ಗೋಡೆಗಳ ಮಧ್ಯ ಕುಳಿತುಕೊಂಡು ಪಕ್ಷ ಕಟ್ಟುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶ್ರೀರಾಮುಲು ಹೇಳಿದರು.