ಹುಬ್ಬಳ್ಳಿ : ಶ್ರೀ ಸಿದ್ಧಾರೂಢರು ಮತ್ತು ಅವರ ಶಿಷ್ಯರಾದ ಶ್ರೀ ಗುರುನಾಥರೂಢರ ಅದ್ವೈತ ಚಿಂತನೆಗಳು ಸೂರ್ಯನಷ್ಟೇ ಪ್ರಕಾಶಮಾನ. ಸೂರ್ಯ, ಚಂದ್ರ ಇರುವವರೆಗೂ ಅವರ ಚಿಂತನೆ ಶಾಶ್ವತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಜಗದ್ಗುರು ಶ್ರೀ ಸಿದ್ಧಾರೂಢರ 190 ನೇಯ ಜಯಂತ್ಯೋತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥರೂಢರ 115 ನೇಯ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಶ್ರೀ ಸಿದ್ಧಾರೂಢರು, ಗುರುನಾಥರೂಢರು ಮಹಾನ್ ಸಾಧಕರು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕರಿಗೆ ಸಾವಿಲ್ಲ. ಸಾವಿನ ನಂತರವೂ ಸಾಧಕರು ಬದುಕಿರುತ್ತಾರೆ. ಸಾವು ಎಂಬುದು ಸಾಧಕರಿಗೆ ಅಂತವ್ಯವಲ್ಲ ಎಂದು ಹೇಳಿದರು.
ಮಾನವ ಧರ್ಮಕ್ಕೂ ಮತ್ತು ಮಾನವ ನಿರ್ಮಿತ ಲೌಕಿಕ ಧರ್ಮಕ್ಕೂ ಬಹಳ ವ್ಯತ್ಯಾಸವಿದೆ. ಮಾನವ ಧರ್ಮ ಪುಣ್ಯಪ್ರಾಪ್ತಿ, ಮೋಕ್ಷ ಕೊಡುವ ಧರ್ಮ. ಲೌಕಿಕ ಧರ್ಮ ಶಿಕ್ಷೆ ಆಧಾರಿತ ಧರ್ಮವಾಗಿದೆ .ಅದೈತವನ್ನು ಅಭ್ಯಾಸ ಮಾಡಿದರೆ ಬದುಕು ಬಹಳ ಸರಳವಾಗುತ್ತದೆ ಎಂದು ನುಡಿದರು.
ಶ್ರೀ ಗುರು ಸಿದ್ಧಾರೂಢರ ಜಯಂತಿ ಆಚರಣೆಯನ್ನು ಸಂಭ್ರಮಸದ ಆಚರಣೆ ಮಾಡುತ್ತಿರುವುದು ಅವರ ಜೀವಂತಿಕೆಗೆ ಸಾಕ್ಷಿ ಎಂದು ನುಡಿದರು.
ಹಸಿವು, ಮರೆವು, ಅರಿವು ಮತ್ತು ಸಾವು ದೇವರು ಕೊಟ್ಟ ವರಗಳು. ಹಸಿವೆ ಇಲ್ಲದಿದ್ದರೆ, ಮರೆವು ಎಂಬುದು ಇಲ್ಲದೇ ಇದ್ದರೆ, ಸಾವೇ ಇಲ್ಲವೆಂದಾಗಿದ್ದರೆ ಜಗತ್ತು ಹೇಗಿರುತ್ತಿತ್ತು ? ಎಂದು ಹೇಳಿದರು.
ಉಡುಪಿ ಪೇಜಾವರಮಠದ ಶ್ರೀ ವಿಶ್ವಪ್ರಸನ್ನತೀರ್ಥರು, ಶ್ರೀ ಸಿದ್ಧಾರೂಢಮಠ ಭಕ್ತರ ಆಜೀವ ಸದಸ್ಯರ ( ಭಕ್ತರ ಮೇಲ್ಮನೆ) ಸಮಿತಿ ಅಧ್ಯಕ್ಷರು, ಮಾಜಿ ಶಾಸಕರು, ಲೋಕ ಶಿಕ್ಷಣ ಟ್ರಸ್ಟ್ ಧರ್ಮಧರ್ಶಿ ಡಿ.ಆರ್ ಪಾಟೀಲ, ಶ್ರೀ ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟರ ಹಾಗೂ ಸದಸ್ಯರು ವೇದಿಕೆಯಲ್ಲಿದ್ದರು.