ಹುಬ್ಬಳ್ಳಿ: ಕೇಂದ್ರ ಗೃಹ ಸಚಿವರು ಜಗದೀಶ ಶೆಟ್ಟರ ಅವರನ್ನು ಕ್ಷಮಿಸಬೇಡಿ ಎಂಬರ್ಥದಲ್ಲಿ ಹೇಳಿಲ್ಲ. ಒಟ್ಟಿನಲ್ಲಿ ಬಿಜೆಪಿ ಗೆಲ್ಲಬೇಕು ಅಷ್ಟೇ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ ಅವರು ಕ್ಷಮೆ ಕೇಳಿಲ್ಲ; ನಾವು ಕ್ಷಮಿಸುವ ಪ್ರಶ್ನೆಯೂ ಬಂದಿಲ್ಲ. ಯಾವುದೇ ಕಾರಣಕ್ಕೂ ಈ ಕ್ಷೇತ್ರ ಬಿಜೆಪಿ ಬಿಟ್ಟು ಹೋಗಬಾರದು ಎಂದು ಹೇಳಿದ್ದಾರೆ ಎಂದು ಜೋಶಿ ಸ್ಪಷ್ಟಪಡಿಸಿದರು.
ಅಮಿತ್ ಶಾ ಅವರು ಸೋಮವಾರ ಇಲ್ಲಿ ಸಭೆ ನಡೆಸಿ ಪಕ್ಷದ ನಾಯಕರಿಗೆ, ಪದಾಧಿಕಾರಿಗಳಿಗೆ ಉತ್ಸಾಹ ತುಂಬಿದ್ದಾರೆ. ಚೈತನ್ಯ ಬಂದಿದೆ. ಇದರ ಪರಿಣಾಮವಾಗಿ ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು.
ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ 35 ಸಾವಿರ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರತಿ ಸಲ 25 ಸಾವಿರ ಅಂತರದಿಂದ ಬಿಜೆಪಿ ಗೆಲ್ಲುತ್ತಿತ್ತು. ಈ ಬಾರಿ 35 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.