ಶೃಂಗೇರಿ: ಜಮ್ಮು-ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಮತ್ತು ಅವರ ಪತ್ನಿ ಶೃಂಗೇರಿ ಶಾರದಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದರು.
ಶಾರದಾ ಮಠದ ಆಡಳಿತಾಧಿಕಾರಿ ಪಿ.ಎ. ಮುರಳಿ ಮತ್ತು ಸಿಬ್ಬಂದಿವರ್ಗ ಅವರನ್ನು ಗೌರವಪೂರ್ವಕವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಬಳಿಕ ಪೊಲೀಸ್ ಇಲಾಖೆಯ ಗೌರವವನ್ನು ಸ್ವೀಕರಿಸಿದರು.
ನಂತರ ಶಾರದಾಂಬೆ, ತೋರಣಗಣಪತಿ, ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿದ ರಾಜ್ಯಪಾಲರು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಶಂಕರಾಚಾರ್ಯ ಬೆಟ್ಟಕ್ಕೆ ತೆರಳಿ 52 ಎತ್ತರದ ಶಂಕರಾಚಾರ್ಯ ಮೂರ್ತಿ ವೀಕ್ಷಿಸಿದರು.
ನರಸಿಂಹವನದ ಗುರು ನಿವಾಸಕ್ಕೆ ತೆರಳಿ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಗುರುಗಳು ಅವರಿಗೆ ಫಲ ಮಂತ್ರಾಕ್ಷತೆ ನೀಡಿದರು. ಶಾರದಾ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.