ಶಾಸಕ ಕೊತ್ತೂರು ವಿರುದ್ಧ ದೇಶದ್ರೋಹ ಕೇಸು ದಾಖಲಿಸಲು ಆಗ್ರಹ

ಸ್ಪಷ್ಟನೆಯ ವೇಳೆ ಮತ್ತೊಂದು ವಿವಾದ
ಕೋಲಾರ:
ಪಾಕಿಸ್ತಾನ ವಿರುದ್ಧ ನಡೆಸಲಾದ ಆಪರೇಷನ್ ಸಿಂದೂರ್ ಮತ್ತು ಭಾರತೀಯ ಸೈನಿಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಕೋಲಾರ ಜಿಲ್ಲಾ ಬಿಜೆಪಿಯು ಶುಕ್ರವಾರ ಸಂಜೆ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಮತ್ತು ಕೆಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್ ಹಾಗೂ ಜಿಲ್ಲಾ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರ ನಿಯೋಗ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಭಾರತದ ಘನತೆ ಮತ್ತು ಭಾರತೀಯ ಸೈನಿಕರ ಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಕೊತ್ತೂರು ಮಂಜುನಾಥ್ ಹೇಳಿಕೆ ನೀಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಉಲ್ಟಾ ಹೊಡೆದ ಶಾಸಕ ಕೊತ್ತೂರು: ಹೇಳಿಕೆಯಲ್ಲಿ ಮತ್ತೊಂದು ವಿವಾದ
ತಮ್ಮ ಹೇಳಿಕೆಗೆ ಸಾರ್ವತ್ರಿಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಾಸಕ ಕೊತ್ತೂರು ಮಂಜುನಾಥ ಶುಕ್ರವಾರ ಸಂಜೆ ಮಾಧ್ಯಮಗಳಿಗೆ ಸ್ಪಷ್ಟ ನೀಡುವ ನೆಪದಲ್ಲಿ ಉಲ್ಟಾ ಹೊಡೆದಿದ್ದಾರೆ.
ನಾನು ಭಾರತದ ಕಾರ್ಯಾಚರಣೆ ಹಾಗೂ ಸೈನಿಕರ ವಿರುದ್ಧ ಮಾತನಾಡಿಲ್ಲ. ನಮ್ಮವರನ್ನು ಕೊಂದ ಉಗ್ರಗಾಮಿಗಳನ್ನು ಸದೆ ಬಡಿಯಬೇಕಿತ್ತು ಎಂಬ ಕಾರಣಕ್ಕಾಗಿ ನೋವಿನಿಂದ ಹೇಳಿಕೆ ನೀಡಿದ್ದೇನೆ ಆದರೆ ಬಿಜೆಪಿಯವರು ಅದನ್ನು ತಿರುಚಿದ್ದಾರೆ ಎಂದು ಕೊತ್ತೂರು ಗುರುವಾರ ನೀಡಿದ್ದ ಹೇಳಿಕೆಗೆ ಉಲ್ಟಾ ಹೊಡೆದರು.
ಹಿಂದೆ ಪುಲ್ವಾಮಾ ದಾಳಿ ನಡೆಸಿ 40 ಸೈನಿಕರನ್ನು ಕೊಂದಾಗಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳುವ ಮೂಲಕ ಪುತ್ತೂರು ಮತ್ತೊಂದು ವಿವಾದ ಸೃಷ್ಟಿಸಿದರು.
ಈಗಲೂ ಸಹ ದಾಳಿ ನಡೆಸಿದ ನಾಲ್ವರು ಭಯೋತ್ಪಾದಕರನ್ನು ಬಂಧಿಸದೆ ಎಲ್ಲಿಯೋ ಹೋಗಿ ನೂರಾರು ಉಗ್ರಗಾಮಿಗಳನ್ನು ಕೊಂದಿರುವುದಾಗಿ ಟಿವಿ ಚಾನಲ್‌ಗಳಲ್ಲಿ ಹೇಳಲಾಗುತ್ತಿದೆ. ಆದರೆ, ಅದನ್ನು ಅಧಿಕೃತವಾಗಿ ದೇಶದ ಮುಖ್ಯಸ್ಥರು ಅಥವಾ ಉನ್ನತ ಅಧಿಕಾರಿಗಳು ಸಮರ್ಥಿಸಿಕೊಂಡಿಲ್ಲ ಎಂದು ಹೇಳುವ ಮೂಲಕ ಕೊತ್ತೂರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.