ಈಗ ಮಂಗಳೂರಿಗೆ ಬೇಕಿರುವುದು ಶಾಂತ ಸೌಹಾರ್ದ ಬಯಸುವ ಮನಸ್ಸುಗಳೇ ಹೊರತು ದ್ವೇಷ ಕಾರುವ ಜೀವಿಗಳಲ್ಲ. ಅದನ್ನು ಕೊಡಲು ಸಾಧ್ಯವಿರುವವರು ಅಲ್ಲಿರಬಹುದು. ಇನ್ನೂ ದ್ವೇಷದ ಭಾವನೆಯಲ್ಲಿರುವವರು ಸ್ವಯಂಪ್ರೇರಣೆಯಿಂದ ಮಂಗಳೂರು ಬಿಟ್ಟು ಕೆಲಕಾಲ ಹೊರಗಡೆ ಇರುವುದು ಒಳಿತು. ಅದರಲ್ಲೂ ರಾಜಕಾರಣಿಗಳು ಕೆಲವು ತಿಂಗಳು ಹೊರ ಜಿಲ್ಲೆಗಳಿಗೆ ಪ್ರವಾಸ ಹೋಗುವುದು ಒಳಿತು. ಇದು ಎಲ್ಲ ರಾಜಕೀಯ ಪಕ್ಷಗಳಿಗೆ ಅನ್ವಯಿಸುವ ಮಾತು. ರಾಜಕಾರಣಿಗಳು ಇಲ್ಲ ಎಂದರೆ ಅರ್ಧ ಸಮಸ್ಯೆ ಬಗೆಹರಿದಂತೆ. ಇನ್ನು ಹಿಂದೂ, ಮುಸ್ಲಿಂ, ಕ್ರ್ತೈಸ್ತ ಧರ್ಮಕ್ಕೆ ಸೇರಿದ ಪೊಲೀಸರ ಪಟ್ಟಿಯಲ್ಲಿರುವ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಅವರ ತಂದೆತಾಯಿಗಳಿಗೆ ತಿಳಿಸಿ ೧೫ ದಿನ ಮಂಗಳೂರು-ಉಡುಪಿ ಜಿಲ್ಲೆಗಳಿಂದ ಗಡಿಪಾರು ಮಾಡಬೇಕು. ಇದು ಸಾಮೂಹಿಕವಾಗಿ ಏಕಕಾಲಕ್ಕೆ ನಡೆಯಬೇಕು. ಎರಡು ಜಿಲ್ಲೆಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಆದೇಶಿಸಬೇಕು. ಯಾವುದೇ ಸಾರ್ವಜನಿಕ ಸಭೆ ಸಮಾರಂಭ ನಡೆಯಬೇಕಾದರೂ ಸಂಬಂಧಪಟ್ಟವರು ಪೊಲೀಸರಿಗೆ ತಮ್ಮ ಜವಾಬ್ದಾರಿ ಮುಚ್ಚಳಿಕೆ ಬರೆದುಕೊಟ್ಟಿರಬೇಕು. ಕೇಂದ್ರ ಸರ್ಕಾರ ಪಾಕ್ ನಿವಾಸಿಗಳನ್ನು ಹೊರ ಹಾಕಲು ಹೇಳಿರುವುದರಿಂದ ಕೂಡಲೇ ಆ ಕೆಲಸ ನಡೆಯಬೇಕು. ಮಂಗಳೂರು- ಉಡುಪಿ ಸಮೀಪ ಇರುವುದು ಕೇರಳ. ಅಲ್ಲಿಯ ಸರ್ಕಾರ ಸಮಾಜಘಾತುಕ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಟ್ಟರೆ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಸಂಘಟಿತ ವಿಧ್ವಂಸಕ ಕೃತ್ಯ ಅಪರಾಧದ ಅಡಿಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕೀಯ ಪಕ್ಷ-ಪಂಗಡ ಜನ ವಿರೋಧಿಯಾಗಿದ್ದರೆ ಅದಕ್ಕೆ ಸರ್ಕಾರ ಯಾವುದೇ ರೀತಿಯ ರಿಯಾಯಿತಿ ನೀಡಬಾರದು. ಇತ್ತೀಚೆಗೆ ಕ್ರಿಮಿನಲ್ ಪ್ರಕರಣದಲ್ಲಿ ತೊಡಗಿದವರ ಮೇಲಿನ ಕೇಸ್‌ಗಳನ್ನು ಸರ್ಕಾರ ಹಿಂದಕ್ಕೆ ಪಡೆಯುವ ಕ್ರಮ ಕೈಗೊಂಡಿದೆ. ಇದು ಸರಿಯಲ್ಲ. ಸಮಾಜ ವಿದ್ರೋಹಿಗಳು ಯಾವುದೇ ರಾಜ್ಯದಲ್ಲಿದ್ದರೂ ಅವರನ್ನು ದಮನ ಮಾಡಬೇಕೆ ಹೊರತು ಬೇರೆ ರಾಜ್ಯದಲ್ಲಿ ನಮಗೆ ಸಂಬಂಧವಿಲ್ಲ ಎಂಬಂತೆ ಇರಬಾರದು.
ಮಂಗಳೂರು- ಉಡುಪಿ ಮೊದಲಿನಿಂದಲೂ ಕೋಮು ಸೌಹಾರ್ದಕ್ಕೆ ಹೆಸರುವಾಸಿ. ಹಿಂದೂ-ಮುಸ್ಲಿಂ-ಕ್ರೈಸ್ತರು-ಜೈನರು ಇಲ್ಲಿ ಅನ್ಯೋನ್ಯದಿಂದ ಇರುವುದು ಇತಿಹಾಸದಲ್ಲೂ ಉಲ್ಲೇಖವಾಗಿದೆ. ಭಟ್ಕಳ ದೇಶ ವಿದ್ರೋಹಿ ಕೆಲಸಗಳಿಗೆ ತಾಣವಾಗಿದೆ ಎಂಬ ಆರೋಪ ಹಿಂದೆ ಕೇಳಿ ಬಂದಿತ್ತು. ಈಗ ಅದು ಇಲ್ಲವಾಗಿರುವುದು ಸಂತಸದ ಸಂಗತಿ. ಈಗ ಧರ್ಮ ಮತ್ತು ರಾಜಕೀಯಕ್ಕೆ ಹೆಚ್ಚಿನ ನಂಟು ಬೆಳೆದಿರುವುದು ಸಮಸ್ಯೆಯಾಗಿದೆ. ಧಾರ್ಮಿಕ ನಂಬಿಕೆಗಳು ರಾಜಕೀಯ ದ್ವೇಷಕ್ಕೆ ಕಾರಣವಾಗಬಾರದು. ಇದು ಎಲ್ಲರ ಜೀವನವನ್ನು ನರಕ ಮಾಡಿಬಿಡುತ್ತದೆ. ಹಿಂದಿನ ರಾಜಕೀಯ ನಾಯಕರು ಇವುಗಳಿಗೆ ಅವಕಾಶ ಕೊಟ್ಟಿರಲಿಲ್ಲ. ಕರಾವಳಿಯ ಜನ ಸಾಕ್ಷರತೆ- ಪ್ರಜ್ಞಾವಂತಿಕೆಗೆ ಮುಂದು. ಅವರು ಇತರರಿಗೆ ಮಾದರಿಯಾಗಿದ್ದವರು. ಇಡೀ ದೇಶಕ್ಕೆ ಬ್ಯಾಂಕಿಂಗ್ ಉದ್ಯಮ ಹೇಗೆ ನಡೆಸಬೇಕೆಂಬುದನ್ನು ತೋರಿಸಿಕೊಟ್ಟವರು. ಹೊಟೇಲ್ ಉದ್ಯಮದಲ್ಲಂತೂ ಎತ್ತಿದ ಕೈ. ಅಂತವರ ಕೈಯಲ್ಲಿ ಈಗ ಮಚ್ಚು, ಚಾಕು ಬಂದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ದೇವಾಲಯಗಳ ನಾಡು ಜಾತಿ ವೈಷಮ್ಯ ಬಿತ್ತುವ ದೆವ್ವದ ಬೀಡಾಗಬಾರದು. ನಮಗೆಲ್ಲರಿಗೂ ಈಗಲೂ ಶಿವರಾಮ ಕಾರಂತ, ಪ್ರೊ ಯು.ಆರ್. ರಾವ್ ಆದರ್ಶ. ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಈಗಲೂ ಕರಾವಳಿ ಉತ್ತಮ ತಾಣ. ದೇಶವಿದೇಶಗಳಿಗೆ ವಿದ್ಯಾರ್ಥಿಗಳು ಅಲ್ಲಿಗೆ ಬಂದು ಅಧ್ಯಯನ ಮಾಡಲು ಬಯಸುತ್ತಾರೆ. ಒಂದು ಕಡೆ ವಿಶಾಲವಾದ ಸಾಗರ. ಮತ್ತೊಂದು ಕಡೆ ಪಶ್ಚಿಮ ಘಟ್ಟಗಳ ರಕ್ಷಣೆ. ತುಂಬಿ ಹರಿಯುವ ನದಿಗಳು. ಪ್ರಕೃತಿಯೇ ಕೈಬೀಸಿ ಕರೆಯುವ ನಾಡು. ಇಂಥ ನಾಡಿನಲ್ಲಿ ಪ್ರೀತಿ ಪ್ರೇಮಗಳು ಅರಳಬೇಕೇ ಹೊರತು ರಕ್ತದೋಕುಳಿಯಲ್ಲ. ಕಳೆದ ೨೦ ವರ್ಷಗಳಲ್ಲಿ ಕರಾವಳಿ ತನ್ನ ಮೂಲಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಎಲ್ಲ ಜನರಿಗೆ ಆಶ್ರಯತಾಣವಾಗಿದ್ದ ತುಳುನಾಡು ತನ್ನ ಶ್ರೀಮಂತ ಸಂಸ್ಕೃತಿ ಸಂಪ್ರದಾಯಗಳಿಂದ ಎಲ್ಲರನ್ನೂ ಕೈಬೀಸಿ ಕರೆಯುತ್ತಿತ್ತು. ಈಗ ಕರಾವಳಿ ಪ್ರದೇಶದಿಂದ ಯಾವಾಗ ಸುರಕ್ಷಿತವಾಗಿ ಹೊರಗೆ ಹೋಗುತ್ತೇವೋ ಎಂಬ ಭಯ ಬೇರೆಯವರಲ್ಲಿ ಮೂಡುವುದಕ್ಕೆ ಸ್ಥಳೀಯರೇ ಕಾರಣ. ಅವರು ತಮ್ಮ ಮನೋಭಾವ ಬದಲಿಸಿಕೊಂಡರೆ ಪ್ರವಾಸಿಗರು ಸಂತೋಷದಿಂದ ಬರುತ್ತಾರೆ. ಇಲ್ಲದಿದ್ದಲ್ಲಿ ಜನ ಮಂಗಳೂರು- ಉಡುಪಿ ಎಂದರೆ ಬೇಡಪ್ಪ ಸಹವಾಸ ಎನ್ನುವಂತಾಗುತ್ತದೆ. ಈ ಚಿತ್ರ ಬದಲಿಸುವ ಶಕ್ತಿ ಅಲ್ಲಿಯ ಜನರ ಕೈಯಲ್ಲೇ ಇದೆ. ಅವರು ಒಗ್ಗಟ್ಟಾಗಿ ಹೊರಗಿನ ಶಕ್ತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ದೃಢ ನಿರ್ಧಾರ ಕೈಗೊಂಡು ಬಹಿರಂಗಪಡಿಸಿದರೆ ಅಂದಿನಿಂದಲೇ ಎಲ್ಲ ಚಟುವಟಿಕೆಗಳು ನಿಂತು ಹೋಗುವುದರಲ್ಲಿ ಸಂದೇಹವಿಲ್ಲ. ಎಲ್ಲ ಧರ್ಮದವರೂ ತಮ್ಮ ನಂಬಿಕೆ -ಆಚರಣೆಗಳನ್ನು ಮನೆಗೆ ಸೀಮಿತಗೊಳಿಸಿಕೊಂಡಲ್ಲಿ ಸಮಸ್ಯೆಗಳು ಬರುವುದೇ ಇಲ್ಲ. ಈಗ ಎಲ್ಲ ದೇಶಗಳಲ್ಲಿ ಇದು ಜಾರಿಗೆ ಬರುತ್ತಿದೆ.