ವೃತ್ತಿಪರ ಶಿಕ್ಷಣ ಪ್ರವೇಶ ಆರಂಭದಲ್ಲೇ ಅಕ್ರಮ

0
5
ಸಂಪಾದಕೀಯ

ವೃತ್ತಿಶಿಕ್ಷಣದಲ್ಲಿ ಮೆರಿಟ್ ರಕ್ಷಣೆಗೆ ತಂದ ಕಾಯ್ದೆ- ಕೋರ್ಟ್ ಆದೇಶಗಳು ಸತ್ವ ಕಳೆದುಕೊಂಡಿದ್ದು ಇದರ ಪುನರ್ ಪರಿಶೀಲನೆ ಕಾರ್ಯಕೈಗೊಂಡಿಲ್ಲ.

ಕರ್ನಾಟಕ ಮೊದಲಿನಿಂದಲೂ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡುತ್ತ ಬಂದಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಮೆರಿಟ್‌ಗೆ ಮೊದಲ ಆದ್ಯತೆ ಇರಬೇಕೆಂದು ಸರ್ಕಾರಿ ಆದೇಶಗಳು ಮತ್ತು ಎಲ್ಲ ನ್ಯಾಯಾಲಯಗಳು ಒಂದಲ್ಲ ಹಲವು ಬಾರಿ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದರೆ ಈಗ ಅದಕ್ಕೆ ತದ್ವಿರುದ್ಧವಾಗಿ ಎಲ್ಲವೂ ನಡೆಯುತ್ತಿದೆ. ಸರ್ಕಾರಿ ಆದೇಶ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಧಿಕ್ಕರಿಸಿ ಕ್ರಮ ಕೈಗೊಳ್ಳುತ್ತಿದ್ದರೂ ಯಾರೂ ಚಕಾರ ಎತ್ತಿಲ್ಲ. ನ್ಯಾಯಾಲಯ ಕೂಡ ತನ್ನ ಆದೇಶ ಪಾಲನೆಯಾಗುತ್ತಿಲ್ಲ ಎಂದು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಕೆಲಸ ಕೈಗೊಂಡಿಲ್ಲ.
ಕರ್ನಾಟಕದ ಸಿಇಟಿ ಪದ್ಧತಿಗೆ ದೇಶಾದ್ಯಂತ ಹೆಸರಿತ್ತು. ಬೇರೆ ರಾಜ್ಯಗಳಿಂದ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇಲ್ಲಿ ಪ್ರವೇಶ ಪಡೆಯಲು ಬಯಸುತ್ತಿದ್ದರು. ಏಕೆಂದರೆ ಆಗ ಮೆರಿಟ್‌ಗೆ ಮೋಸ ಆಗುತ್ತಿರಲಿಲ್ಲ. ಈಗ ವಂತಿಗೆ ಶುಲ್ಕ ಎಲ್ಲ ಕಡೆ ವ್ಯಾಪಿಸಿದೆ. ಸಿಇಟಿಯಲ್ಲಿ ಉತ್ತಮ ರ‍್ಯಾಂಕ್ ಪಡೆದವರಿಗೂ ಉತ್ತಮ ಕಾಲೇಜು ಮತ್ತು ಉತ್ತಮ ವಿಷಯ ಸಿಗುವುದು ಖಚಿತವಾಗಿಲ್ಲ. ೧೯೮೪ ರಲ್ಲಿ ರಾಜ್ಯ ಸರ್ಕಾರ ವಂತಿಗೆ ಶುಲ್ಕ ನಿಷೇಧಿಸಿ ಕಾಯ್ದೆಯನ್ನೇ ಜಾರಿಗೆ ತಂದಿತು. ವಂತಿಗೆ ಶುಲ್ಕ ಸಂಬಂಧಿಸಿದಂತೆ ಕಾನೂನು ಹೋರಾಟ ಸುಪ್ರೀಂ ಕೋರ್ಟ್‌ವರೆಗೂ ನಡೆಯಿತು. ವಕೀಲ ರವಿವರ್ಮ ಕುಮಾರ್ ವಿದ್ಯಾರ್ಥಿಗಳ ಪರ ವಕಾಲತ್ತುವಹಿಸಿ ಕೊನೆಗೆ ಜಯಶೀಲರಾದರು. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಕಾಲೇಜು ನಡೆಸುವವರು ಲಾಭ ಅಥವಾ ನಷ್ಟದ ಲೆಕ್ಕಾಚಾರವಿಲ್ಲದೆ ನಡೆಸಬೇಕು. ಇದು ಹಣ ಮಾಡುವ ಕೇಂದ್ರವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಪ್ರತಿ ವರ್ಷ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ಸಮಿತಿಗಳನ್ನು ರಚಿಸಬೇಕು. ಇದಕ್ಕೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಬೇಕು. ಒಂದು ಸಮಿತಿ ಪ್ರತಿ ಕಾಲೇಜಿನ ಬೋಧನಾ ಶುಲ್ಕವನ್ನು ನಿಗದಿಪಡಿಸಬೇಕು. ಮತ್ತೊಂದು ಸಮಿತಿ ಎಲ್ಲ ಕಾಲೇಜುಗಳು ಶುಲ್ಕ ನಿಗದಿಪಡಿಸುವ ಸಮಿತಿ ನೀಡಿರುವ ಆದೇಶವನ್ನು ಪಾಲಿಸುತ್ತಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಬೇಕು. ಈ ಎರಡೂ ಸಮಿತಿಗಳು ಪ್ರತಿ ವರ್ಷ ರಚನೆಯಾಗುತ್ತಿವೆ. ಆದರೆ ಇವುಗಳಿಂದ ವಿದ್ಯಾರ್ಥಿಗಳಿಗ ಒಂದು ನಯಾ ಪೈಸೆ ಉಪಯೋಗವಿಲ್ಲ. ಸರ್ಕಾರ ತನ್ನ ಕಾಯ್ದೆಗೆ ತಾನೇ ತಿದ್ದುಪಡಿ ತಂದು ಪರಸ್ಪರ ಸಂಧಾನದ ಮೂಲಕ ಶುಲ್ಕ ಮತ್ತು ಸೀಟುಗಳನ್ನು ಪ್ರತಿ ಕಾಲೇಜಿಗೂ ನಿಗದಿಪಡಿಸಬಹುದು ಎಂದು ನಿಯಮ ಮಾಡಿಕೊಂಡಿದೆ. ಹೀಗಾಗಿ ನ್ಯಾಯಾಲಯದಿಂದ ರಚನೆಗೊಂಡ ಎರಡು ಸಮಿತಿಗಳು ನೆಪಮಾತ್ರಕ್ಕೆ ಉಳಿದುಕೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಶಿಕ್ಷಣ ಶುಲ್ಕ ಮತ್ತು ಸೀಟುಗಳ ಹಂಚಿಕೆಯನ್ನು ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮೆರಿಟ್ ಎಂಬುದು ಕೆಲಸಕ್ಕೆ ಬಾರದ ವಸ್ತುವಾಗಿ ಹೋಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪರೀಕ್ಷೆ ನಡೆಸಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳನ್ನು ಮಾರಾಟ ಮಾಡಿಬಿಡುತ್ತವೆ. ಅನಂತರ ಸಿಇಟಿ ಸೀಟು ಹಂಚಿಕೆ ಕಾರ್ಯವನ್ನು ಕೈಗೊಳ್ಳುತ್ತದೆ. ಮೆರಿಟ್ ಇದ್ದರೂ ನಿಗದಿತ ಕಾಲೇಜು ಮತ್ತು ವಿಷಯ ಸಿಗುವುದಿಲ್ಲ ಎಂದು ಬಹುತೇಕ ವಿದ್ಯಾರ್ಥಿಗಳು ಆತಂಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ಕೊಟ್ಟು ಸೇರಿಕೊಂಡು ಬಿಡುತ್ತಾರೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದಿದೆ. ಸಿಇಟಿ ಇನ್ನೂ ಸೀಟು ಹಂಚಿಕೆ ವಿವರ ಪ್ರಕಟಿಸುವ ಹಂತದಲ್ಲಿದೆ. ಈ ವಿಳಂಬ ಉದ್ದೇಶಪೂರ್ವಕವೋ ಅಥವಾ ಸರ್ಕಾರದ ಮಂದಗತಿ ಧೋರಣೆಯೋ ತಿಳಿಯುತ್ತಿಲ್ಲ. ಮೆರಿಟ್ ವಿದ್ಯಾರ್ಥಿಗಳನ್ನು ಸರ್ಕಾರವೇ ಶೋಷಣೆ ಮಾಡಿದರೆ ಏನು ಮಾಡಲು ಸಾಧ್ಯ? ಖಾಸಗಿ ಶಿಕ್ಷಣಸಂಸ್ಥೆಗಳು ರಾಜಕಾರಣಿಗಳು ಮತ್ತು ಧಾರ್ಮಿಕ ಸಂಸ್ಥೆಗಳ ಕೈಯಲ್ಲಿದೆ. ನ್ಯಾಯಾಂಗ ಕೂಡ ತನ್ನ ಆದೇಶಕ್ಕೆ ಬೆಲೆ ಇಲ್ಲ ಎಂದು ಗೊತ್ತಾಗಿದ್ದರೂ ಸ್ವಯಂ ಅಧಿಕಾರವನ್ನು ಬಳಸಿಕೊಳ್ಳುತ್ತಿಲ್ಲ.

Previous articleಮನೆಯ ಗೋಡೆ ಕುಸಿದು ಯುವಕ ಸಾವು
Next articleಕರ್ತವ್ಯನಿರತನಾಗು