ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಅನುಧಾನ ನೀಡಲು ಸಾಧ್ಯವಿಲ್ಲವೇ: ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರ ರಾಜ್ಯಕ್ಕೆ ಹೋಗಬೇಕೇ…?
ಬೆಂಗಳೂರು: ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ ಕೊಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರಿ ಕಣ್ಣು ಹೋರಿ ಮೇಲೆ ಅನ್ನುವಂತೆ ಸಿದ್ದರಾಮಯ್ಯ ಕಣ್ಣು ವಿವಿಗಳ ಮೇಲೆ ಬಿದ್ದಿದೆ. 9 ವಿವಿಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ, ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲ. ಕೆಪಿಎಸ್‌ಸಿಯಲ್ಲಿ ತಪ್ಪಿಲ್ಲದೇ ಸರಿಯಾಗಿರುವ ಪ್ರಶ್ನೆ ಪತ್ರಿಕೆ ಕೊಡುವ ಯೋಗ್ಯತೆ ಇಲ್ಲ. ಈಗ ನಾಲ್ಕು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ, ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್‌ಗಳನ್ನು ಮುಚ್ಚಿ ನೊಡೋಣ. ಇದೇ ಕಾಂಗ್ರೆಸ್ ನೀತಿ. ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರ ರಾಜ್ಯಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿದ್ದಾರೆ.