ಬೆಳಗಾವಿ: ವಿಮಾ ಹಣದ ಆಸೆಗಾಗಿ ಒಡಹುಟ್ಟಿದ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ವಿಲಕ್ಷಣ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಣಮಂತ ಗೋಪಾಲ ತಳವಾರ(೩೫) ಎಂಬುವನೇ ಕೊಲೆಯಾಗಿದ್ದ ವ್ಯಕ್ತಿ. ಈತನ ತಮ್ಮ ಬಸವರಾಜ ತಳವಾರ ಹಣಮಂತನ ಹೆಸರಲ್ಲಿ ೫೦ ಲಕ್ಷ ಇನ್ಸೂರೆನ್ಸ್ ಮಾಡಿಸಿದ್ದ ಇನ್ಸೂರೆನ್ಸ್ ನಾಮಿನಿಗೆ ತನ್ನ ಹೆಸರನ್ನೇ ದಾಖಲು ಮಾಡಿಸಿದ್ದ. ಅಣ್ಣ ಸತ್ತರೆ ತನಗೆ ಲಾಭ ಎಂದು ಲೆಕ್ಕಾಚಾರ ಹಾಕಿದ ಆತ ತನ್ನ ಸ್ನೇಹಿತನ ಜತೆ ಸೇರಿ ಪಾರ್ಟಿ ನೆಪದಲ್ಲಿ ಅಣ್ಣನಿಗೆ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿಸಿದ್ದಾನೆ.
ಅಣ್ಣನ ಮೃತದೇಹ ಕಂಡ ನಂತರ ಸ್ನೇಹಿತರ ಜತೆ ಪರಾರಿಯಾಗಿದ್ದ ಈತ ತಿಂಗಳ ನಂತರ ಊರಿಗೆ ಮರಳಿದ್ದಾಗ ಪೊಲೀಸರಿಗೆ ಸಂಶಯ ಮೂಡಿದೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ವಿಮಾ ಹಣದ ಸಂಚು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಬಸವರಾಜ್ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಕಂಟೆನ್ನವರ್ ಎಂಬಾತರನ್ನು ಘಟಪ್ರಭಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.