ಬೆಂಗಳೂರು: ವಿಜಯಪುರ – ಮಂಗಳೂರು ಸೆಂಟ್ರಲ್ (07377/07378) ವಿಶೇಷ ತಾತ್ಕಾಲಿಕ ರೈಲನ್ನು ಶಾಶ್ವತವಾಗಿ ಓಡಿಸಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಈ ಮೊದಲು ಈ ವಿಶೇಷ ರೈಲನ್ನು ಕೆಲ ತಿಂಗಳಿಗೊಮ್ಮೆ ವಿಸ್ತರಿಸಲಾಗುತ್ತಿತ್ತು. ಇದೀಗ ʼವಿಜಯಪುರ – ಮಂಗಳೂರು ಸೆಂಟ್ರಲ್ (17377/17378) ಎಕ್ಸ್‌ಪ್ರೆಸ್ ಶಾಶ್ವತ ರೈಲನ್ನಾಗಿಸಿʼ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ರೈಲು ಉತ್ತರ ಕರ್ನಾಟಕದಿಂದ ಕರಾವಳಿಯ ಮಂಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದ್ದು, ಸಾಮಾನ್ಯ ಪ್ರಯಾಣಿಕರು, ಪ್ರವಾಸಿಗರು, ವೈದ್ಯಕೀಯ ಸೌಲಭ್ಯ ಹಾಗೂ ಶಿಕ್ಷಣಕ್ಕಾಗಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಈ ಭಾಗದ ಜನತೆ ಈ ರೈಲಿನ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರುತ್ತೇನೆ ಎಂದಿದ್ದಾರೆ.