ವಾಣಿಜ್ಯನಗರಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ

0
18

ಹುಬ್ಬಳ್ಳಿ: ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು, ಮಂಗಳವಾರ ಸಂಜೆ ಧಾರಾಕಾರ ಆಲಿಕಲ್ಲು ಮಳೆ ಸುರಿಯಿತು. ಇಡೀ ರಸ್ತೆ, ಓಣಿಗಳಿಗೆಲ್ಲ ಆಲಿಕಲ್ಲುಗಳನ್ನು ತಂದು ಸುರಿದಂತೆ ಕಂಡು ಬಂದಿತು.
ಸಂಜೆ ೬ ಗಂಟೆ ಹೊತ್ತಿಗೆ ಭಾರೀ ಗಾಳಿಯೊಂದಿಗೆ ಭರ್ಜರಿ ಆಲಿಕಲ್ಲು ಮಳೆ ಸುರಿದಿದ್ದು, ಸಂಜೆ ೬.೪೫ಕ್ಕೆ ಅರಂಭವಾದ ಆಲಿಕಲ್ಲು ಸಹಿತ ಭಾರೀ ಮಳೆ ಅಹ್ಲಾದಕರ ಅನುಭವ ನೀಡಿತು.
ಆಲಿಕಲ್ಲುಗಳು ಒಂದಕ್ಕಿಂತ ಒಂದು ನೆಲದ ಮೇಲೆ ಹರಡಿ ಹಿಮಾಲಯದ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು. ಬೆಳಿಗ್ಗೆಯಿಂದ ಬಿಸಿಲಿನ ಧಗೆ ಅನುಭವಿಸಿದ್ದ ಹುಬ್ಬಳ್ಳಿ ಮಂದಿಗೆ ಸಂಜೆಯ ಮಳೆ ತಂಪು ವಾತಾವರಣ ಸೃಷ್ಟಿಸಿತ್ತು.
ಸಂಜೆ ೬ ಗಂಟೆ ಹೊತ್ತಿಗೆ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ನೋಡ ನೋಡುತ್ತಿದ್ದಂತೆಯೇ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಇದರಿಂದ ವಾಹನ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ರಸ್ತೆಗಳಲ್ಲೇ ಸಿಲುಕಿ ಪರದಾಡುವಂತಾಯಿತು.
ಸುಮಾರು ಒಂದು ಗಂಟೆಗಳ ಕಾಲ ಅಬ್ಬರಿಸಿದ ಮಳೆ ಹಲವು ಅವಾಂತರಗಳನ್ನೂ ಸೃಷ್ಟಿ ಮಾಡಿತ್ತು.
ಸತತ ಮೂರನೇ ದಿನವಾದ ಮಂಗಳವಾರ ಮಳೆ ಸುರಿದಿದ್ದು, ಈ ಹಿಂದಿನ ಎರಡು ದಿನ ಕಣಿಸಿಕೊಂಡಿದ್ದ ಸಿಡಿಲು ಮತ್ತು ಗುಡುಗಿನ ಆರ್ಭಟ ಇಂದು ಇರಲಿಲ್ಲ. ಎರಡೂ ದಿನಕ್ಕೆ ವಿಭಿನ್ನ ಎಂಬಂತೆ ಆಲಿಕಲ್ಲು ಮಳೆ ಸುರಿದಿದ್ದು, ಜನರಿಗೆ ಹೊಸ ಅನುಭವ ನೀಡಿದೆ. ಆಲಿಕಲ್ಲು ಕಂಡ ಜನ ತಮ್ಮದೇ ಅನುಭವಗಳನ್ನು ಹಂಚಿಕೊಂಡರು. ಹಿರಿಯರು ಆಲಿಕಲ್ಲುಗಳನ್ನು ಮಕ್ಕಳ ಕೈಗಿಟ್ಟು ಖುಷಿಪಟ್ಟರು.

Previous articleಆನ್ಲೈನ್ ಉದ್ಯೋಗದ ಆಮಿಷ; 1.99 ಲಕ್ಷ ವಂಚನೆ
Next articleಧಾರವಾಡದ ಕುವರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್