ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಸಿ, ಕಾನೂನು ಸುವ್ಯವಸ್ಥೆ ಹಾಳುಮಾಡುತ್ತಾ, ವಾಕ್ ಸ್ವತಂತ್ರ ಕಿತ್ತುಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಯುವಬ್ರಿಗೇಡ್ ಆಯೋಜಿಸಿರುವ “ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ” ವಿಚಾರ ಉಪನ್ಯಾಸ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಅವರಿಗೆ ಭಾಗವಹಿಸಲು ಅವಕಾಶ ಕೊಡಬಾರದು ಎನ್ನುವುದು ಕಾಂಗ್ರೆಸ್ ಪಕ್ಷದ ಯಾವ ಸಂಸ್ಕೃತಿ? ಇದು ಸಂವಿಧಾನ ವಿರೋಧಿ ಚಟುವಟಿಕೆಯಲ್ಲವೇ? ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ತಾಕೀತು ಮಾಡಿ ಪೊಲೀಸರು ನೋಟಿಸ್ ಕೊಡುವುದು ವಾಕ್ ಸ್ವತಂತ್ರ ಕಿತ್ತುಕೊಳ್ಳವುದು ಅಲ್ಲವೇ, ಇದು ಅಸಹಿಷ್ಣುತೆಯ ಪರಮಾವಧಿಯಲ್ಲವೇ ಸಿದ್ದರಾಮಯ್ಯನವರೇ? ನಿಷೇಧಿತ PFI ನಂಟು ಹೊಂದಿರುವ SDPI ರಾಜಕೀಯ ಪಕ್ಷಕ್ಕೆ, ನೀವು, ನಿಮ್ಮ ಸರ್ಕಾರ ಬೆಂಬಲ ವ್ಯಕ್ತಪಡಿಸುತ್ತಿರುವುದು ದೇಶದ್ರೋಹದ ಕೆಲಸವಲ್ಲವೇ ಸಿದ್ದರಾಮಯ್ಯನವರೇ?
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿ ವಾಕ್ ಸ್ವತಂತ್ರ ಕಿತ್ತುಕೊಂಡು ತುಷ್ಠಿಕರಣ ರಾಜಕಾರಣದ ರೂವಾರಿ ಕಾಂಗ್ರೆಸ್. ದೇಶದ ಪರ ಮಾತನಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು, ಅವರ ಮನೆಗಳಿಗೆ ರಾತ್ರೋರಾತ್ರಿ ನುಗ್ಗುವುದು, ಗಡಿಪಾರು ಅಸ್ತ್ರ ಬಳಸುವುದು, ಜಿಲ್ಲೆಗಳಿಗೆ ಆಗಮಿಸದಂತೆ ನಿರ್ಬಂಧ ಹೇರುತ್ತಾ ಪೊಲೀಸರನ್ನು ತಮ್ಮ ಕೈಗೊಂಬೆಗಳಂತೆ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ತುರ್ತುಪರಿಸ್ಥಿತಿ ಜಾರಿ ಮಾಡುವುದು ಸಾಮಾನ್ಯವಾಗಿದೆ. ಅಂದು ಇಂದಿರಾಗಾಂಧಿ, ಇಂದು ಸಿದ್ದರಾಮಯ್ಯ ತುರ್ತುಪರಿಸ್ಥಿತಿ ತರುವ ಮೂಲಕ ಇತಿಹಾಸಕ್ಕೆ ಕಪ್ಪುಚುಕ್ಕೆ ಎಂದಿದ್ದಾರೆ.