ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎರಡು ಕರಡಿಗಳು ಇಬ್ಬರು ರೈತರ ಮೇಲೆ ಏಕಾಏಕಿ ದಾಳಿ ನಡೆಸಿದ ಘಟನೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯ ಕುಂಬರಡಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಕುಂಬರಡಿ ಗ್ರಾಮದ ಗಿಡ್ಡಯ್ಯ ಎಂಬುವರ ತೋಟದಲ್ಲಿ ಬುಧವಾರ ಗೊಬ್ಬರ ಹಾಕುತ್ತಿದ್ದ ಸಂದರ್ಭದಲ್ಲಿ ಗಿಡ್ಡಯ್ಯ ಮತ್ತು ವಿನಯ್‌ಗೌಡ ಎಂಬುವರ ಮೇಲೆ ಎರಡು ಕರಡಿ ಏಕಾಏಕಿ ದಾಳಿ ನಡೆಸಿ ಇಬ್ಬರಿಗೂ ತಲೆ, ಬೆನ್ನು, ಕೈ ಕಾಲುಗಳಿಗೆ ಉಗುರಿನಿಂದ ಪರಚಿವೆ. ಇದರಿಂದ ಗಂಭೀರ ಗಾಯಗೊಂಡು ಇಬ್ಬರನ್ನೂ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳೆದ ಕೆಲ ವರ್ಷದ ಹಿಂದೆ ಇದೇ ಗ್ರಾಮದಲ್ಲಿ ಚಂದ್ರೇಗೌಡ ಮತ್ತು ಅವರ ಪುತ್ರ ಆದರ್ಶ ಎಂಬುವರ ಮೇಲೆ ಕರಡಿ ದಾಳಿ ಮಾಡಿತ್ತು. ಇದರಿಂದ ಚಂದ್ರೇಗೌಡ ಅವರು ಗಂಭೀರ ಗಾಯಗೊಂಡಿದ್ದರು. ಘಟನೆ ಮಾಸಿ ಹೋಗುವಷ್ಟರಲ್ಲಿ ಇದೀಗ ಮತ್ತೆ ಕರಡಿ ಕಾಣಿಸಿಕೊಂಡು ಇಬ್ಬರು ರೈತರ ಮೇಲೆ ದಾಳಿ ನಡೆಸಿದೆ. ಇದರಿಂದ ತೋಟಕ್ಕೆ ತೆರಳಲು ಜನ ಭಯಭೀತರಾಗಿದ್ದಾರೆ.
ತೋಟದಲ್ಲಿ ತುಂಬಾ ಮಂಜು ಕವಿದ ವಾತಾವರಣವಿದಿದ್ದರಿಂದ ಕರಡಿ ಆಗಮಿಸಿರುವುದು ಗಮನಕ್ಕೆ ಬಂದಿಲ್ಲ. ಅಲ್ಲದೇ ಕರಡಿ ಮರಿ ಹಾಕಿದೆ. ಇದರಿಂದ ಮತ್ತೆ ಜನರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳನ್ನು ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.