ರೆಡ್ಡಿ ಪ್ರಕರಣ `ನಲ್ ಆ್ಯಂಡ್ ವಾಯ್ಡ್’ ಆಗಲಿದೆ

ಹುಬ್ಬಳ್ಳಿ: ಮಾಜಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಒಳ್ಳೆಯದಾಗುತ್ತೆ. ಯಾವುದೋ ಕೆಳ ಹಂತದ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಅಪರಾಧಿ ಎನ್ನಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಜನಾರ್ದನರೆಡ್ಡಿ ಅವರನ್ನು ಅಪರಾಧಿ ಎಂದು ಹೇಳಿಲ್ಲ. ಪ್ರಕರಣಕ್ಕೆ ತಡೆಯಾಜ್ಞೆ ದೊರೆಯುವ ಭರವಸೆ ಇದ್ದು, ರೆಡ್ಡಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ನಲ್ ಆ್ಯಂಡ್ ವಾಯ್ಡ್' ಆಗಲಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರೆಡ್ಡಿ ನನ್ನ ಆತ್ಮೀಯ ಸ್ನೇಹಿತನಾಗಿದ್ದ. ರಾಜಕೀಯವಾಗಿ ನಾನು ಅವರನ್ನು ತೆಗಳಿರಬಹುದು. ಆದರೆ, ವೈಯಕ್ತಿಕವಾಗಿ ಯಾವತ್ತೂ ಕೆಟ್ಟದ್ದನ್ನು ಬಯಸುವುದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಕ್ಕೆ ಇತಿಶ್ರೀ ಬೀಳಲಿದ್ದು, ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದಿಲ್ಲ. ಶಾಸಕ ಸತೀಶ್ ಸೈಲ್ ಪ್ರಕರಣದ ರೀತಿಯಲ್ಲೇ ರೆಡ್ಡಿ ಪ್ರಕರಣದಲ್ಲೂ ಜಾಮೀನು ಸಿಗಲಿದೆ’ ಎಂದರು.
ಮಂಗಳವಾರ ನಡೆದ ಸಾಧನಾ ಸಮಾವೇಶದಲ್ಲಿ ಮಾರುದ್ದ ಭಾಷಣ ಮಾಡಿದ ರಾಹುಲ್ ಗಾಂಧಿ, ವಾಲ್ಮೀಕಿ ನಿಗಮದ ಹಣ ನುಂಗಿದ ಮಾಜಿ ಸಚಿವ ನಾಗೇಂದ್ರನನ್ನು ಪಕ್ಕಕ್ಕೆ ಕೂಡಿಸಿಕೊಂಡು, ಪ.ಜಾ/ಪ.ಪಂ ಹಾಗೂ ಹಿಂದುಳಿದವರ ಕಲ್ಯಾಣದ ಬಗ್ಗೆ ಮಾತನಾಡಿದ್ದಾರೆ. ನಾವೇನು ಕಿವಿಗೆ ಹೂ ಇಟ್ಟುಕೊಂಡಂತೆ ಕಾಣುತ್ತೇವೆಯೇ ಎಂದು ಗುಡುಗಿದರು.
ಆಪರೇಷನ್ ಸಿಂದೂರ ಬಗ್ಗೆ ಅಪಸ್ವರ ಎತ್ತುತ್ತಿರುವ ಮಲ್ಲಿಕಾರ್ಜುನ ಖರ್ಗೆ, ದಾಳಿಯ ಬಗ್ಗೆ ಮೋದಿ ಅವರಿಗೆ ಮೊದಲೇ ಮಾಹಿತಿ ಇತ್ತು ಎಂದು ಹೇಳಿದ್ದಾರೆ. ಇವರೇನು ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ರಾ? ಮೋದಿ ಅವರಿಗೆ ಮೊದಲೇ ವಿಷಯ ತಿಳಿದಿದ್ದರೆ ಉಗ್ರಗಾಮಿಗಳನ್ನು ಕೆಡವಿ ಹೊಡೆಯುತ್ತಿದ್ದರು. ನಾಲಿಗೆ ಇದೆ ಎಂದಾಕ್ಷಣ ಬೇಕಾಬಿಟ್ಟಿ ಮಾತನಾಡಬಾರದು ಎಂದು ಎಚ್ಚರಿಸಿದ ರಾಮುಲು, ರಾಜ್ಯದಲ್ಲಿ ಮುಖ್ಯಮಂತ್ರಿಯ ಕುರ್ಚಿ ಅಲ್ಲಾಡುತ್ತಿದೆ. ಸಾಧನಾ ಸಮಾವೇಶದಲ್ಲಿ ಹಳೆ ರೆಡಿಯೋ ತರ ಹೇಳಿದ್ದನ್ನೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರದ್ದು ಬರೀ ಗಾನ ಬಜನಾ ಕೆಲಸ..! ಅವರ ಭಾಷಣ ಸಂಪೂರ್ಣ ಸುಳ್ಳಿನಿಂದ ಕೂಡಿತ್ತು. ಅಲ್ಲದೆ, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು 6ನೇ ಗ್ಯಾರಂಟಿಯ ಭರವಸೆ ನೀಡಿದ್ದಾರೆ ಎಂದು ಕಿಡಿ ಕಾರಿದರು.