ರಾಜ್ಯಪಾಲರ ಪರಮಾಧಿಕಾರಕ್ಕೆ ಕತ್ತರಿ ಪ್ರಯೋಗ ಖಂಡನೀಯ

0
25

ಬೆಂಗಳೂರು: ಸರ್ಕಾರ ರಾಜ್ಯಪಾಲರಿಗಿರುವ ಪರಮಾಧಿಕಾರಕ್ಕೆ ಕತ್ತರಿ ಪ್ರಯೋಗ ಮಾಡಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಶಿಕ್ಷಣದಲ್ಲಿ ರಾಜಕೀಯ ಬೆರೆಯಬಾರದು ಎಂಬ ಸದುದ್ದೇಶದಿಂದ ಸಂವಿಧಾನದ ಆಶಯಕ್ಕೆ ಪೂರಕವಾಗಿ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೂ ಆದ ಗೌರವಾನ್ವಿತ ರಾಜ್ಯಪಾಲರೇ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳಾಗಿರುವುದು ಶಿಕ್ಷಣದ ಭೂಷಣ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸದ್ಯ ಈಗಿರುವ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸರಣಿ ಭ್ರಷ್ಟಾಚಾರಗಳಲ್ಲಿ ತೊಡಗಿರುವುದರ ನಡುವೆಯೇ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮಲಿನಗೊಳಿಸಲು ಹೊರಟಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತು ಮುಖ್ಯಮಂತ್ರಿ ಅವರಿಗೆ ನೀಡಲು ಹೊರಟಿರುವ ಸರ್ಕಾರದ ನಿಲುವು ಗ್ರಾಮೀಣಾಭಿವೃದ್ಧಿ ಅಧ್ಯಯನ ಕ್ಷೇತ್ರದಲ್ಲೂ ಅನಗತ್ಯ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಲಿದೆ.

ಈ ಮೊದಲಿನಿಂದಲೂ ರಾಜ್ಯಪಾಲರ ಕುರಿತು ಅಸಹನೆ ತೋರುತ್ತಿರುವ ಹಾಗೂ ರಾಜ್ಯಪಾಲರನ್ನು ವೈರಿಯಂತೆ ನೋಡುತ್ತಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ರಾಜ್ಯಪಾಲರಿಗಿರುವ ಪರಮಾಧಿಕಾರಕ್ಕೆ ಕತ್ತರಿ ಪ್ರಯೋಗ ಮಾಡಲು ಹೊರಟಿರುವುದು ಸಾಂವಿಧಾನಿಕ ವ್ಯವಸ್ಥೆನ್ನು ವಿಚಲಿತಗೊಳಿಸುವ ಹೊನ್ನಾರದಿಂದ ಕೂಡಿದೆ. ರಾಜ್ಯ ಸರ್ಕಾರದ ಈ ನಡೆ ಅತ್ಯಂತ ಖಂಡನೀಯ ಎಂದಿದ್ದಾರೆ.

Previous articleಕನ್ನಡಿಗರ ಪ್ರೀತಿ, ಅಭಿಮಾನಗಳಿಂದ RCB ಬೆಳೆದಿದೆ: ವಿಶ್ವಾಸಘಾತಕ ಸಹಿಸಿಕೊಳ್ಳಲು ಸಾಧ್ಯವಿಲ್ಲ…
Next articleಸಿದ್ದನಕೊಳ್ಳ ಮಠದಿಂದ ಅತಿರಥ ಮಹಾರಥರಿಗೆ ಪ್ರಶಸ್ತಿ ಘೋಷಣೆ