ರಾಜ್ಯ ಸರಕಾರದಿಂದ ನಾಲ್ವರಿಗೆ ಪರಿಹಾರ: ಶರತ್ ಮಡಿವಾಳ ಕುಟುಂಬಕ್ಕೆ ಯಾಕಿಲ್ಲ..?

0
20
ಶರತ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ಯೆಗೀಡಾದ ನಾಲ್ವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ೨೫ ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಲಾಗಿದೆ. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್‌ನ ಮೊಹಮ್ಮದ್ ಫಾಜಿಲ್, ಅಬ್ದುಲ್ ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ೨೫ ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ಬೆಳ್ಳಾರೆಯ ಮಸೂದ್ ಎಂಬುವರನ್ನು ೨೦೨೨ರ ಜುಲೈ ೧೯ ರಂದು ಹತ್ಯೆ ಮಾಡಲಾಗಿತ್ತು. ಸುರತ್ಕಲ್ನ ಮೊಹಮ್ಮದ್ ಫಾಜಿಲ್‌ನನ್ನು ೨೦೨೨ ಜುಲೈ ೨೮ ರಂದು ಕೊಲೆ ಮಾಡಲಾಗಿತ್ತು. ೨೦೨೨ ಡಿಸೆಂಬರ್ ೨೪ರಂದು ಸುರತ್ಕಲ್ನ ಅಬ್ದುಲ್ ಜಲೀಲ್ ಹತ್ಯೆಗೀಡಾಗಿದ್ದರು. ಸುರತ್ಕಲ್‌ನ ದೀಪಕ್ ರಾವ್ ಅವರನ್ನು ೨೦೧೮ರ ಜನವರಿ ೩ರಂದು ಕೊಲೆ ಮಾಡಲಾಗಿತ್ತು. ಆಗಿನ ವಿಧಾನಸಭೆ ಎಲೆಕ್ಷನ್ಗೂ ಮುನ್ನ ನಡೆದ ಈ ಹತ್ಯೆ ಪ್ರಕರಣ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿ ಚುನಾವಣಾ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು.
೨೦೨೨ ಜುಲೈ ೨೮ ರಂದು ಫಾಜಿಲ್ ಹತ್ಯೆ ನಡೆದಿತ್ತು. ಇದಕ್ಕೂ ಕೆಲದಿನಗಳ ಮುನ್ನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ನೆಟ್ಟಾರು ಕೊಲೆ ಆಗಿತ್ತು. ಬಳಿಕ ಕೆಲ ದಿನಗಳ ಅಂತರದಲ್ಲಿ ಜಲೀಲ್ ಎಂಬಾತನ ಕೊಲೆ ಮಾಡಲಾಗಿತ್ತು. ಈ ಹತ್ಯೆಗಳಿಂದ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಲ್ಲಿ ಕೆಲವು ಘಟನೆಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದವು. ಇದರಲ್ಲಿ ಪ್ರವೀಣ್ ನೆಟ್ಟಾರು ಹೊರತುಪಡಿಸಿ ಬೇರೆ ಯಾರಿಗೂ ಸರ್ಕಾರ ಪರಿಹಾರ ವಿತರಣೆ ಮಾಡಿರಲಿಲ್ಲ. ಆದರೆ ಈಗ ಉಳಿದ ಮೂವರಿಗೂ ಜತೆಗೆ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‌ಗೂ ಪರಿಹಾರ ನೀಡಲಾಗಿದೆ.
ಶರತ್ ಮಡಿವಾಳಗೆ ಯಾಕಿಲ್ಲ: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ ೪ ಕುಟುಂಬಗಳಿಗೆ ತಲಾ ೨೫ ಲಕ್ಷ ರೂಪಾಯಿ ಪರಿಹಾರವನ್ನು ಸರಕಾರ ಘೋಷಣೆ ಮಾಡಿದೆ. ಆದರೆ ನಮ್ಮ ಕುಟುಂಬಕ್ಕೆ ಪರಿಹಾರ ಒದಗಿಸಿಲ್ಲ ಎಂದು ಹತ್ಯೆಗೀಡಾದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಹೇಳಿದ್ದು, ಸರಕಾರ ತಾರತಮ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ನಮ್ಮ ಕುಟುಂಬಕ್ಕೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
೨೦೧೭ ರ ಜುಲೈ ೭ ರಂದು ಶರತ್ ಮಡಿವಾಳ ಹತ್ಯೆ ನಡೆದಿತ್ತು. ಬಂಟ್ವಾಳದ ಬಿ.ಸಿ ರೋಡ್‌ನಲ್ಲಿ ಶರತ್ ಮಡಿವಾಳ ಉದಯ ಲಾಂಡ್ರಿ ಹೆಸರಿನ ಅಂಗಡಿ ಹೊಂದಿದ್ದರು. ೨೦೧೭ ರ ಜುಲೈ ೭ ರಂದು ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುವ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಮಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜುಲೈ ೭ರಂದು ಕೊನೆಯುಸಿರೆಳಿದಿದ್ದರು.
ಇಂದಿಗೂ ಮಗನ ಸಾವಿಗೆ ನ್ಯಾಯ ದೊರೆತಿಲ್ಲ ಎಂದು ತನಿಯಪ್ಪ ಮಡಿವಾಳ ಕೊರಗುತ್ತಿದ್ದಾರೆ. ಇಂದಿಗೂ ಅದೇ ಲಾಂಡ್ರಿಯಲ್ಲಿ ೭೪ ವರ್ಷದ ತನಿಯಪ್ಪ ದುಡಿಮೆ ಮಾಡುತ್ತಿದ್ದು ತಮಗೆ ಇದುವರೆಗೆ ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರ ವಾಗಲಿ ಇದುವರೆಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ನಮ್ಮ ಸಮಸ್ಯೆಗಳಿಗೆ ಕಷ್ಟಕ್ಕೆ ಯಾವ ಸರ್ಕಾರವೂ ಸ್ಪಂದಿಸಿಲ್ಲ. ನನ್ನ ಮಗನ ಪ್ರಕರಣದಲ್ಲಿ ಸರಿಯಾಗಿ ತನಿಖೆ ಆಗಿಲ್ಲ . ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಅಥವಾ ಸಿಬಿಐಗೆ ವಹಿಸಬೇಕು, ಕೂಡಲೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Previous articleಪದವಿ ಪೂರ್ವ ಕಾಲೇಜಿಗಾಗಿ ಅಕ್ಷರ ಸಂತ ಹಾಜಬ್ಬನ ಮನವಿ
Next articleಮತಾಂತರ, ಗೋಹತ್ಯೆ ನಿಷೇಧ ಪರಿಷ್ಕರಣೆ: ಮರುಪರಿಶೀಲನೆಗೆ ಆಗ್ರಹ